ಮಹದೇವಪುರ: ನಿರಂತರ ಮಳೆಯ ಆರ್ಭಟದ ನಡುವೆ ಮಹದೇವಪುರ ಕ್ಷೇತ್ರದ ಕುಂದಲಹಳ್ಳಿ ಕಾಲೋನಿಯಲ್ಲಿ ಬೃಹತ್ ಮರವೊಂದು ಧರೆಗೆ ಉರುಳಿದ ಪರಿಣಾಮ ಎರಡು ಕಾರುಗಳು ಜಖಂಗೊಂಡ ಘಟನೆ ನಡೆದಿದೆ.
ಕುಂದಲಹಳ್ಳಿ ಕಾಲೋನಿಯ 3ನೇ ಕ್ರಾಸ್‌ನಲ್ಲಿ ನಡೆದ ಈ ಘಟನೆಯಲ್ಲಿ ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬವೂ ನೆಲಕ್ಕಪ್ಪಳಿಸಿದೆ. ಘಟನೆಯ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಭಾರಿ ಮಳೆ ಹಾಗೂ ಗಾಳಿಯ ಪರಿಣಾಮ ಮರ ಧರೆಗುರುಳಿರುವ ಸಾಧ್ಯತೆ ಇದ್ದು, ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಬಿಎ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೃಹತ್ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದರು.
ಮರ ಹಾಗೂ ವಿದ್ಯುತ್ ಕಂಬ ಬಿದ್ದ ಪರಿಣಾಮ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಮರಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.



