ನೆಲಮಂಗಲ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿರುವ ಹಿನ್ನೆಲೆ ನೆಲಮಂಗಲ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಸಂಭ್ರಮದ ಅಂಗವಾಗಿ ಕ್ಷೇತ್ರದ ಸಾವಿರಾರು ಕುಟುಂಬಗಳಿಗೆ ಉಚಿತ ಸಿಹಿ ವಿತರಿಸುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸುಮಾರು 90 ಸಾವಿರ ಮನೆಗಳಿಗೆ ತಲಾ 750 ಗ್ರಾಂ ತೂಕದ ಲಾಡು ಬಾಕ್ಸ್ ವಿತರಿಸುವ ಗುರಿಯನ್ನು ಆಯೋಜಕರು ಹೊಂದಿದ್ದಾರೆ. ಇದಕ್ಕಾಗಿ ಭಾರಿ ಪ್ರಮಾಣದಲ್ಲಿ ಸಿದ್ಧತೆ ನಡೆಸಲಾಗಿದ್ದು, ಈಗಾಗಲೇ ಲಾಡು ತಯಾರಿಕೆ ಅಂತಿಮ ಹಂತ ತಲುಪಿದೆ.
ಸುಮಾರು 250 ರಿಂದ 300 ಬಾಣಸಿಗರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 9 ರಿಂದ 10 ಲಕ್ಷ ಲಾಡುಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿತರಣಾ ಕಾರ್ಯದಲ್ಲಿ ನೂರಾರು ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಭಾಗಿಯಾಗಲಿದ್ದಾರೆ.
ಕ್ಷೇತ್ರದ ಪ್ರತಿಯೊಂದು ಗ್ರಾಮ ಹಾಗೂ ಪ್ರತಿಯೊಂದು ಮನೆಗೂ ಸಿಹಿ ತಲುಪಿಸುವ ಉದ್ದೇಶದಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೊನೆಯ ಮನೆಗೂ ಲಾಡು ತಲುಪುವವರೆಗೆ ಅಭಿಯಾನ ಮುಂದುವರಿಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪಟ್ಟಕ್ಕೇರಿರುವ ಡಿಕೆ ಶಿವಕುಮಾರ್ ಅವರ ಸಾಧನೆಯನ್ನು ಸಂಭ್ರಮಿಸುವ ಜೊತೆಗೆ ಜನರೊಂದಿಗೆ ಸಂತಸ ಹಂಚಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.



