ಮುಂಬೈ: ಐಪಿಎಲ್‌ನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಇದೀಗ ಜಾಹೀರಾತು ಲೋಕದ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದ್ದಾರೆ. ಮೈದಾನದಲ್ಲಿ ರನ್‌ಗಳ ಸುರಿಮಳೆಗೈದಿರುವ ಈ ಯುವ ಆಟಗಾರನ ಹಿಂದೆ ದೇಶದ ಪ್ರಮುಖ ಕಂಪನಿಗಳು ಬ್ರಾಂಡ್ ಅಂಬಾಸಿಡರ್ ಆಗಿ ಸೇರ್ಪಡೆಗೊಳಿಸಲು ಪೈಪೋಟಿ ನಡೆಸುತ್ತಿವೆ.
ಐಪಿಎಲ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದ ಬಳಿಕ ವೈಭವ್ ಸೂರ್ಯವಂಶಿ ಅವರ ಬ್ರಾಂಡ್ ಮೌಲ್ಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಕ್ರೀಡಾ ಪಾನೀಯಗಳು, ಪೌಷ್ಠಿಕಾಂಶ ಉತ್ಪನ್ನಗಳು ಹಾಗೂ ಫೂಟ್ವೇರ್ ಕ್ಷೇತ್ರದ ಹಲವು ಪ್ರಮುಖ ಕಂಪನಿಗಳು ಅವರೊಂದಿಗೆ ಒಪ್ಪಂದಕ್ಕೆ ಮುಂದಾಗಿದ್ದು, ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎನ್ನಲಾಗಿದೆ.
ಕೇವಲ 15 ವರ್ಷದವರಾಗಿರುವ ವೈಭವ್ ಮುಂದೆ ದೀರ್ಘ ಕ್ರಿಕೆಟ್ ವೃತ್ತಿಜೀವನವಿರುವ ಕಾರಣ ಕಂಪನಿಗಳು ಅವರನ್ನು ಭವಿಷ್ಯದ ಹೂಡಿಕೆ ಎಂದು ಪರಿಗಣಿಸುತ್ತಿವೆ. ಇದೇ ಕಾರಣಕ್ಕೆ ದೀರ್ಘಾವಧಿಯ ಬದಲು ಆರಂಭಿಕವಾಗಿ 2 ರಿಂದ 3 ವರ್ಷಗಳ ಅವಧಿಯ ಒಪ್ಪಂದಗಳಿಗೆ ಹೆಚ್ಚಿನ ಆಸಕ್ತಿ ತೋರಲಾಗುತ್ತಿದೆ.
ವೈಭವ್ ಸೂರ್ಯವಂಶಿ ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ ಜಾಹೀರಾತು ಹಾಗೂ ವಾಣಿಜ್ಯ ಒಪ್ಪಂದಗಳ ಜವಾಬ್ದಾರಿಯನ್ನು ಅವರ ಕುಟುಂಬಸ್ಥರು ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಕಾನೂನು ಸಲಹೆ ಹಾಗೂ ಅಗತ್ಯ ಮಾರ್ಗದರ್ಶನ ನೀಡುತ್ತಿದೆ ಎಂದು ವರದಿಯಾಗಿದೆ.
ವೈಭವ್ ಈಗಾಗಲೇ ಕಾಂಪ್ಲಾನ್, ರೆಡ್ ಬುಲ್ ಸೇರಿದಂತೆ ಹಲವು ಪ್ರಮುಖ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಒಂದು ಜಾಹೀರಾತಿಗೆ ಸುಮಾರು ₹1 ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ನಂತರ ₹1.5 ಕೋಟಿಗೆ ಏರಿಸಿದ್ದರು. ಇದೀಗ ಐಪಿಎಲ್‌ನ ಅದ್ಭುತ ಪ್ರದರ್ಶನದ ಬಳಿಕ ಅವರ ಪ್ರತಿ ಜಾಹೀರಾತಿನ ಮೌಲ್ಯ ಬರೋಬ್ಬರಿ ₹2 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಾರಿಯ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಟೂರ್ನಿಯ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. 16 ಪಂದ್ಯಗಳಲ್ಲಿ 237.37ರ ಸ್ಟ್ರೈಕ್‌ರೇಟ್‌ನೊಂದಿಗೆ ಒಟ್ಟು 776 ರನ್ ಕಲೆಹಾಕಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದರೊಂದಿಗೆ ಕೇವಲ 15ನೇ ವಯಸ್ಸಿನಲ್ಲಿ ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಜೊತೆಗೆ ಪವರ್‌ಪ್ಲೇ ಅವಧಿಯಲ್ಲೇ 500ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ವಿಶೇಷ ಸಾಧನೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಮೈದಾನದೊಳಗೆ ಬ್ಯಾಟ್ ಮೂಲಕ ದಾಖಲೆಗಳನ್ನು ನಿರ್ಮಿಸುತ್ತಿರುವ ವೈಭವ್ ಸೂರ್ಯವಂಶಿ, ಮೈದಾನದ ಹೊರಗೆ ಬ್ರಾಂಡ್ ಡೀಲ್‌ಗಳ ಮೂಲಕ ಭಾರತೀಯ ಕ್ರೀಡಾ ಕ್ಷೇತ್ರದ ಅತ್ಯಂತ ಬೇಡಿಕೆಯ ಯುವ ಮುಖವಾಗಿ ಹೊರಹೊಮ್ಮಿದ್ದಾರೆ.



