ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಹತ್ವದ ರಾಜಕೀಯ ನಡೆ ಕೈಗೊಂಡಿದ್ದು, ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸ ‘ಧವಳಗಿರಿ’ಗೆ ಭೇಟಿ ನೀಡಿದ ಡಿಕೆಶಿ, ಸ್ವತಃ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಭೇಟಿ ವೇಳೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲೂ ಚರ್ಚೆ ನಡೆದಿದ್ದು, ಹೊಸ ಸರ್ಕಾರದ ಕಾರ್ಯಚಟುವಟಿಕೆಗಳಿಗೆ ವಿರೋಧ ಪಕ್ಷದಿಂದ ರಚನಾತ್ಮಕ ಸಹಕಾರ ನೀಡುವಂತೆ ಡಿಕೆಶಿ ಕೋರಿದ್ದಾರೆ ಎನ್ನಲಾಗಿದೆ.
ಇಂದು ಸಂಜೆ ರಾಜಭವನ ಆವರಣದ ಗಾಜಿನ ಮನೆಯಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದು, ಯಡಿಯೂರಪ್ಪ ಕೂಡ ಆಹ್ವಾನಿತರ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ.



