ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರ ಪ್ರಮಾಣವಚನ ಸಮಾರಂಭದ ಬಳಿಕ ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಹೊಸ ಸರ್ಕಾರದ ಸ್ವಾಗತಕ್ಕಾಗಿ ವಿಧಾನಸೌಧವನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದ್ದು, ಎಲ್ಲೆಡೆ ಹಬ್ಬದ ಕಳೆ ಕಂಡುಬಂದಿದೆ.
ವಿಧಾನಸೌಧದ ಪ್ರಮುಖ ಪ್ರವೇಶ ದ್ವಾರಗಳನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿದೆ. ವಿವಿಧ ಜಾತಿಯ ಆಕರ್ಷಕ ಹೂಗಳನ್ನು ಬಳಸಿ ತೋರಣಗಳು ಮತ್ತು ವಿಶೇಷ ವಿನ್ಯಾಸದ ಅಲಂಕಾರಗಳನ್ನು ಮಾಡಲಾಗಿದ್ದು, ಹೊಸ ಸರ್ಕಾರಕ್ಕೆ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆ ನಡೆಸಲಾಗಿದೆ.
ಮುಖ್ಯಮಂತ್ರಿ ಹಾಗೂ ಸಚಿವರ ಮೊದಲ ಸಭೆ ನಡೆಯಲಿರುವ ಕ್ಯಾಬಿನೆಟ್ ಸಭಾಂಗಣಕ್ಕೂ ವಿಶೇಷ ಮೆರುಗು ನೀಡಲಾಗಿದೆ. ಸುಗಂಧಭರಿತ ಹೂಗಳಿಂದ ಸಭಾಂಗಣವನ್ನು ಅಲಂಕರಿಸಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂತಿಮ ಹಂತದ ಸಿದ್ಧತೆಗಳಲ್ಲಿ ತೊಡಗಿದ್ದಾರೆ.
ಪ್ರಮಾಣವಚನ ಸ್ವೀಕಾರದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದು, ನೂತನ ಸಚಿವರೊಂದಿಗೆ ಮೊದಲ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸರ್ಕಾರದ ಆರಂಭಿಕ ಆಡಳಿತಾತ್ಮಕ ನಿರ್ಧಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಉತ್ಸಾಹದ ವಾತಾವರಣ ಕಂಡುಬಂದಿದ್ದು, ಆಡಳಿತ ಯಂತ್ರವೂ ಹೊಸ ಜವಾಬ್ದಾರಿಗಳಿಗೆ ಸಜ್ಜಾಗಿದೆ.



