ವಿಜಯಸಾಕ್ಷಿ ಸುದ್ದಿ, ಗದಗ: ಛಾಯಾಗ್ರಾಹಕರ ಸಾಮಾಜಿಕ ಭದ್ರತೆಗೆ ಮಹತ್ವದ ಹೆಜ್ಜೆಯಾಗಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ (ಕೆಪಿಎ) “ಆಸರೆ ಯೋಜನೆ”ಯನ್ನು ಜಾರಿಗೆ ತಂದಿದ್ದು, ನೋಂದಾಯಿತ ಛಾಯಾಗ್ರಾಹಕ ಆಕಸ್ಮಿಕವಾಗಿ ನಿಧನರಾದಲ್ಲಿ ಅವರ ಕುಟುಂಬಕ್ಕೆ ₹1 ಲಕ್ಷ ಆರ್ಥಿಕ ನೆರವು ನೀಡುವ ಘೋಷಣೆ ಮಾಡಲಾಗಿದೆ.
ನಗರದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಮಠದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಎ ಆಸರೆ ಯೋಜನೆಯ ಪೋಸ್ಟರ್‌ಗಳನ್ನು ಅನಾವರಣಗೊಳಿಸಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಯಿತು. ಗದಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಛಾಯಾಗ್ರಾಹಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರ್‌ವಾಡೆ, ಮುಖ್ಯ ಕಾರ್ಯದರ್ಶಿ ಮಹದೇವಗೌಡ ಸಂಕನಗೌಡ್ರು, ಹಾಗೂ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು (ಕೆಪಿಎ) ನೂತನ ನಿರ್ದೇಶಕ ಮಂಜುನಾಥ ಎಸ್. ಲಕ್ಷಟ್ಟಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮಹದೇವಗೌಡ ಸಂಕನಗೌಡ್ರು, “ರಾಜ್ಯದಲ್ಲಿಯೇ ಮೊದಲ ಬಾರಿಗೆ ಛಾಯಾಗ್ರಾಹಕರಿಗಾಗಿ ಇಂತಹ ಆಸರೆ ಯೋಜನೆ ಜಾರಿಗೆ ತರಲಾಗಿದೆ. ಸ್ವಾಭಾವಿಕ ಮರಣ, ಅಪಘಾತ ಅಥವಾ ಅನಾರೋಗ್ಯದಿಂದ ಛಾಯಾಗ್ರಾಹಕ ಮೃತಪಟ್ಟರೆ ಅವರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಎಲ್ಲ ಛಾಯಾಗ್ರಾಹಕರು ಜಾಗೃತರಾಗಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.
ಕೆಪಿಎ ನಿರ್ದೇಶಕ ಮಂಜುನಾಥ ಎಸ್. ಲಕ್ಷಟ್ಟಿ ಮಾತನಾಡಿ, “ಜೂನ್ 1ರಿಂದ ರಾಜ್ಯಾದ್ಯಂತ ಯೋಜನೆ ನೋಂದಣಿ ಆರಂಭಗೊಂಡಿದೆ. ನೋಂದಾಯಿತ ಸದಸ್ಯರು ಆಕಸ್ಮಿಕವಾಗಿ ನಿಧನರಾದಲ್ಲಿ ಅವರ ಕುಟುಂಬಕ್ಕೆ ₹1 ಲಕ್ಷ ನೆರವು ನೀಡಲಾಗುವುದು. ಗದಗ ಜಿಲ್ಲೆಯ ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆಯಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಹಾಗೂ ತಾಲೂಕಿನ ಸಮಸ್ತ ಛಾಯಾಗ್ರಾಹಕರು ಉಪಸ್ಥಿತರಿದ್ದರು.



