ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನದಲ್ಲಿ ಬಾಲ್ಯವೇ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಹಂತದಲ್ಲಿ ಪಡೆಯುವ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.
ನಗರದ ರಂಗನವಾಡಿಯ ಸರ್ಕಾರಿ ಶಾಲೆ ನಂ.11ನಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕ-ಶಿಕ್ಷಕರ ಮಹಾಸಭೆ-2026-27 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಅವರ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ, ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು” ಎಂದು ಕರೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿಂದ ದ್ವಿಭಾಷಾ ಶಿಕ್ಷಣ ನೀಡಲಾಗುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜಕ ಮುರಳಿ ಸೋಲ್ಲಾಪೂರ ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿ ಮಕ್ಕಳೊಂದಿಗೆ ಆತ್ಮೀಯ ಬಾಂಧವ್ಯವಿದ್ದು, ಶಿಕ್ಷಕರು ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬೋಧಿಸುತ್ತಾರೆ. ಪೌಷ್ಠಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಎಂ.ಆರ್. ಕರಮುಡಿ ಮಾತನಾಡಿ, ಶಾಲೆಯು ಸಮುದಾಯದ ಕೇಂದ್ರಬಿಂದುವಾಗಿದ್ದು, ಪಾಲಕರು ಶಾಲೆಯೊಂದಿಗೆ ನಿರಂತರ ಸಂಪರ್ಕ ಹೊಂದಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಭಾರತಿ ಕುಲಕರ್ಣಿ ಸ್ವಾಗತಿಸಿದರು. ಆರ್.ಬಿ. ಹೊಸಮನಿ ಪ್ರಾರ್ಥಿಸಿದರು. ಎಂ.ವೈ. ಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ನೌರಿನ್ ಜಾಲಿಹಾಳ ವಂದಿಸಿದರು.
ಮಹಾಪೋಷಕರ ಸಭೆಯಲ್ಲಿ ವಹೀದಾ ನರೇಗಲ್ಲ, ಸುರೇಖಾ ಹಡಪದ, ತೈಷಿನ್ಭಾನು ಧಾರವಾಡ, ಹನುಮವ್ವ ವಾಲ್ಮೀಕಿ, ಸೈನಜ್ ಕೊಪ್ಪಳ, ಮಂಗಳಾ ಹಿರೇಮಠ, ದಿಲ್ಶಾದ್ ಮುಲ್ಲಾ, ಖೈರುನ್ಭೀ ಸರಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಶಾಲಾ ಮಕ್ಕಳಿಗೆ ಹೂವು ನೀಡಿ, ಆರತಿ ಬೆಳಗಿ, ಸಿಹಿ ಹಂಚುವ ಮೂಲಕ ಹಬ್ಬದ ವಾತಾವರಣದಲ್ಲಿ ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲಾಯಿತು.
“ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು.”
ಕವಿತಾ ದಂಡಿನ



