ನವದೆಹಲಿ/ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ ಆರು ವಕೀಲರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಹಾಗೂ ಇಬ್ಬರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಜೂನ್ 2ರಂದು ನಡೆದ ಸಭೆಯಲ್ಲಿ ಈ ಶಿಫಾರಸು ಮಾಡಿದೆ. ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಾಧೀಶರಾಗಿ ರಾಘವೇಂದ್ರ ಸೀತಾರಾಮ್ ಶ್ರೀವತ್ಸ, ಹೇಮಾ ಕುಲಕರ್ಣಿ, ಸುಬ್ರಹ್ಮಣ್ಯ ರಂಗರಾವ್, ತಡಗವಾಡಿ ಪ್ರಕಾಶ ವಿವೇಕಾನಂದ, ಬಕ್ಕೇಶ್ವರ ಪ್ರಮೋದ್ ಹಾಗೂ ಹೊಂಬೆ ಗೌಡ ಶಾಂತಿಭೂಷಣ್ ಅವರ ಹೆಸರುಗಳನ್ನು ಅನುಮೋದಿಸಲಾಗಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂವು ನ್ಯಾಯಾಂಗ ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಪ್ರಮುಖ ಪಾತ್ರವಹಿಸುವ ಅತ್ಯುನ್ನತ ಸಮಿತಿಯಾಗಿದೆ. ಈ ಸಮಿತಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದ ಹೆಸರುಗಳನ್ನು ಪರಿಶೀಲಿಸಿ ಶಿಫಾರಸು ಮಾಡುತ್ತದೆ.
ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಕೇಂದ್ರ ಕಾನೂನು ಸಚಿವಾಲಯದ ಮೂಲಕ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ. ಸರ್ಕಾರ ಪರಿಶೀಲನೆ ನಡೆಸಿದ ಬಳಿಕ ರಾಷ್ಟ್ರಪತಿಗಳ ಅಂಕಿತದೊಂದಿಗೆ ನೇಮಕಾತಿ ಪ್ರಕ್ರಿಯೆ ಅಂತಿಮಗೊಳ್ಳುತ್ತದೆ.
ಒಮ್ಮೆ ಸರ್ಕಾರ ಶಿಫಾರಸನ್ನು ಮರುಪರಿಶೀಲನೆಗೆ ವಾಪಸ್ ಕಳುಹಿಸಬಹುದಾದರೂ, ಕೊಲಿಜಿಯಂ ಅದೇ ಹೆಸರುಗಳನ್ನು ಮತ್ತೆ ಶಿಫಾರಸು ಮಾಡಿದರೆ ಸರ್ಕಾರ ಅವುಗಳನ್ನು ಅಂಗೀಕರಿಸುವುದು ಕಡ್ಡಾಯವಾಗುತ್ತದೆ ಎಂದು ಪ್ರಕ್ರಿಯೆಯ ವಿವರ ನೀಡಲಾಗಿದೆ.



