ಆನೇಕಲ್: ಮಾಜಿ ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ ಅವರ ಅಪಹರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, 3 ಕೋಟಿ ರೂಪಾಯಿ ಸುಲಿಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳ ಮೂಲದ ಪ್ರವೀಣ್, ರೋಮಿಯೋ ಮಾರ್ಟಿನ್, ಅಶಿಕ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ. ಅಪಹರಣಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಮಧ್ಯರಾತ್ರಿ ವೇಳೆ ಗೋಲ್ಡ್ ಕಾಯಿನ್ ಕ್ಲಬ್ನಿಂದ ಹೊರಟಿದ್ದ ದಯಾನಂದ ರೆಡ್ಡಿ ಅವರ ಕಾರನ್ನು ಹಿಲಲಿಗೆ ಗ್ರಾಮದ ಬಳಿ ತಡೆದ ಆರೋಪಿಗಳು, ಉಡುಗೊರೆ ನೀಡುವ ನೆಪದಲ್ಲಿ ಕಾರಿನ ಬಾಗಿಲು ತೆರೆಯುವಂತೆ ಮಾಡಿದ್ದಾರೆ. ಇದೇ ವೇಳೆ ಕಾರಿನೊಳಗೆ ನುಗ್ಗಿದ ಆರೋಪಿ ಗನ್ ತೋರಿಸಿ ಬೆದರಿಕೆ ಹಾಕಿ ವಾಹನವನ್ನು ತನ್ನ ನಿಯಂತ್ರಣಕ್ಕೆ ಪಡೆದಿದ್ದಾನೆ.
ನಂತರ ಅತ್ತಿಬೆಲೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ‘ನಿಮ್ಮ ಹತ್ಯೆಗೆ 10 ಕೋಟಿ ರೂಪಾಯಿ ಸುಪಾರಿ ಬಂದಿದೆ’ ಎಂದು ಬೆದರಿಕೆ ಹಾಕಿದ್ದಾರೆ. ಜೀವ ಉಳಿಸಿಕೊಳ್ಳಲು ಹಣ ನೀಡುವುದಾಗಿ ದಯಾನಂದ ರೆಡ್ಡಿ ಮನವಿ ಮಾಡಿಕೊಂಡಾಗ, ಆರೋಪಿಗಳು 3 ಕೋಟಿ ರೂಪಾಯಿ ಬೇಡಿಕೆ ಇಟ್ಟು ಬಳಿಕ 2 ಕೋಟಿ ರೂಪಾಯಿಗೆ ಇಳಿದಿದ್ದರು.
ಬೆಳಗ್ಗೆ ಬ್ಯಾಂಕ್ನಿಂದ ಹಣ ತೆಗೆಯುವುದಾಗಿ ಹೇಳಿದ ದಯಾನಂದ ರೆಡ್ಡಿ ಅವರನ್ನು ಆರೋಪಿಗಳು ಬಿಡುಗಡೆ ಮಾಡಿದ್ದರು. ಬಳಿಕ ಅವರು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.



