ವಿಜಯಪುರ: ಟ್ರ್ಯಾಕ್ಟರ್ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮುದ್ದೇಬಿಹಾಳ ಕ್ರಾಸ್ ಬಳಿ ನಡೆದಿದೆ.
ಮೃತರು ಟ್ರ್ಯಾಕ್ಟರ್ನಲ್ಲಿ ಕಬ್ಬು ಕಟಾವಿನ ಕೆಲಸಕ್ಕಾಗಿ ಇಂಡಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ಕಾರ್ಮಿಕರಾಗಿದ್ದರು ಎಂದು ತಿಳಿದುಬಂದಿದೆ. ಟ್ರ್ಯಾಕ್ಟರ್ನಲ್ಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಇದ್ದ ಕಾರಣ ಚಾಲಕ ವಾಹನವನ್ನು ನಿಧಾನವಾಗಿ ಚಲಾಯಿಸುತ್ತಿದ್ದರು.
ಈ ವೇಳೆ ಹಿಂಬದಿಯಿಂದ ಅತಿವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ನಲ್ಲಿದ್ದ ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ನಿಡಗುಂದಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಹಾಗೂ ಲಾರಿ ಚಾಲಕನ ನಿರ್ಲಕ್ಷ್ಯದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



