ಬೆಂಗಳೂರು: ನಗರದ ಬಹುನಿರೀಕ್ಷಿತ ಬ್ಲೂ ಲೈನ್ ಮೆಟ್ರೋ ಯೋಜನೆಗೆ ಮಹತ್ವದ ಮೈಲುಗಲ್ಲು ಸಿಕ್ಕಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗಕ್ಕಾಗಿ ತಯಾರಿಸಲಾದ ಮೊದಲ ಮೆಟ್ರೋ ರೈಲು ಬುಧವಾರ ಬೈಯಪ್ಪನಹಳ್ಳಿ ಡಿಪೋಗೆ ತಲುಪಿದೆ.
ಬಿಎಂಆರ್ಸಿಎಲ್ ಡಿಸೆಂಬರ್ ವೇಳೆಗೆ ಬ್ಲೂ ಲೈನ್ ಮೊದಲ ಹಂತವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಮೊದಲ ರೈಲು ಆಗಮನ ಯೋಜನೆಗೆ ಮತ್ತಷ್ಟು ವೇಗ ನೀಡಿದೆ. ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂವರೆಗೆ ಸಂಪರ್ಕ ಕಲ್ಪಿಸುವ ಮೊದಲ ಹಂತವನ್ನು ಈ ವರ್ಷಾಂತ್ಯದಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ.
58.19 ಕಿಲೋಮೀಟರ್ ಉದ್ದದ ಬ್ಲೂ ಲೈನ್ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲಿದೆ. ಈ ಯೋಜನೆಗಾಗಿ ಒಟ್ಟು 38 ಡ್ರೈವರ್ಲೆಸ್ ರೈಲುಗಳ ಖರೀದಿಗೆ ಆದೇಶ ನೀಡಲಾಗಿದ್ದು, ಅವುಗಳನ್ನು ಬೆಂಗಳೂರು ಮೂಲದ ಬೆಮಲ್ ಸಂಸ್ಥೆ ನಿರ್ಮಿಸುತ್ತಿದೆ.
ಮೊದಲ ಹಂತದ 19.75 ಕಿಲೋಮೀಟರ್ ಉದ್ದದ ಸಿಲ್ಕ್ ಬೋರ್ಡ್–ಕೆ.ಆರ್.ಪುರಂ ಮಾರ್ಗದಲ್ಲಿ 13 ನಿಲ್ದಾಣಗಳು ನಿರ್ಮಾಣವಾಗಲಿವೆ. ಎರಡನೇ ಹಂತದ ಕೆ.ಆರ್.ಪುರಂ–ವಿಮಾನ ನಿಲ್ದಾಣ ಮಾರ್ಗವು 38.44 ಕಿಲೋಮೀಟರ್ ಉದ್ದವಿದ್ದು, 17 ನಿಲ್ದಾಣಗಳನ್ನು ಒಳಗೊಂಡಿರಲಿದೆ.
ಒಟ್ಟು 30 ನಿಲ್ದಾಣಗಳನ್ನು ಹೊಂದಿರುವ ಬ್ಲೂ ಲೈನ್ ಯೋಜನೆಯನ್ನು ಸುಮಾರು 14,788 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ವೇಗವಾದ ಮತ್ತು ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ಈ ಯೋಜನೆ, ಪೂರ್ಣಗೊಂಡ ಬಳಿಕ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ.



