ಬಳ್ಳಾರಿ: ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನಡೆದ ಅವೈಜ್ಞಾನಿಕ ರಸ್ತೆ ಕಾಮಗಾರಿಯ ದುರ್ಘಟನೆಗೆ ಮತ್ತೊಂದು ಅಮಾಯಕ ಜೀವ ಬಲಿಯಾಗಿರುವ ಘಟನೆ ಚಾಣಕನೂರು ಕ್ರಾಸ್ ಬಳಿ ನಡೆದಿದೆ.
ರಾವಿಹಾಳ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳ (36) ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತಿ ಚಂದ್ರಶೇಖರ್ (46) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಜುಳ ಹಾಗೂ ಚಂದ್ರಶೇಖರ್ ಅವರು ರಾತ್ರಿ ಕರ್ತವ್ಯ ಮುಗಿಸಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ, ರಾಜ್ಯ ಹೆದ್ದಾರಿ 63ರ ಚಾಣಕನೂರು ಕ್ರಾಸ್ ಬಳಿ ರಸ್ತೆ ಕಾಮಗಾರಿಗಾಗಿ ತೆರೆದಿದ್ದ ಗುಂಡಿಗೆ ಬೈಕ್ ಬಿದ್ದಿದೆ. ಯಾವುದೇ ಮುನ್ನೆಚ್ಚರಿಕೆ ಫಲಕ ಅಥವಾ ಬ್ಯಾರಿಕೇಡ್ ಹಾಕದೆ ಗುಂಡಿಯನ್ನು ಹಾಗೇ ಬಿಟ್ಟಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ರಾತ್ರಿಯ ಕತ್ತಲಲ್ಲಿ ಗುಂಡಿ ಕಾಣಿಸದ ಕಾರಣ ಬೈಕ್ ನೇರವಾಗಿ ಅದರಲ್ಲಿ ಬಿದ್ದು ದುರ್ಘಟನೆ ನಡೆದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮಂಜುಳ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೆದ್ದಾರಿ ಕಾಮಗಾರಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



