ಬೆಂಗಳೂರು: ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ವಿವಿಧ ಯುಜಿಸಿಇಟಿ ಕೋರ್ಸ್ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.
ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆ.10ರೊಳಗೆ ನಿಗದಿತ ಶುಲ್ಕ ಪಾವತಿಸಬೇಕು. ಬಳಿಕ ಸೀಟು ಖಾತರಿ ಚೀಟಿಯನ್ನು ಡೌನ್ಲೋಡ್ ಮಾಡಿಕೊಂಡು ಸೆ.11ರೊಳಗೆ ಸಂಬಂಧಪಟ್ಟ ಕಾಲೇಜಿಗೆ ತೆರಳಿ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಮೂರನೇ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳಿಗೆ ಕಾಲೇಜು ಪ್ರವೇಶ ಕಡ್ಡಾಯವಾಗಿದೆ. ಸೀಟು ರದ್ದತಿ ಕೋರಿ ಸಲ್ಲಿಸುವ ಯಾವುದೇ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ನಿಗದಿತ ಅವಧಿಯಲ್ಲಿ ಕಾಲೇಜಿಗೆ ಪ್ರವೇಶ ಪಡೆಯದ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೆಇಎ ಎಚ್ಚರಿಕೆ ನೀಡಿದೆ.



