ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಆಡಳಿತವನ್ನು ಮತ್ತಷ್ಟು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಗೆ ಪರ್ಯಾಯವಾಗಿ ಕೃತಕ ಬುದ್ಧಿಮತ್ತೆ (AI) ಹಾಗೂ ಜಿಪಿಎಸ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧಿಕೃತ ಆದೇಶ ಹೊರಡಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಜಾರಿಗೊಳಿಸಲಾಗಿದೆ.
ಆದೇಶದ ಪ್ರಕಾರ, ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಹಾಜರಾತಿ ದಾಖಲಿಸಲು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ‘ಕರ್ತವ್ಯ’ ಆ್ಯಪ್ ಅನ್ನು ಬಳಸುವುದು ಕಡ್ಡಾಯವಾಗಲಿದೆ.
ಜೂನ್ 4ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ನೌಕರರ ಸಮಯಪಾಲನೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಸ್ಪಷ್ಟ ಸೂಚನೆ ನೀಡಿದ್ದರು. ಅದರಂತೆ, ಈಗಾಗಲೇ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS)ಯಲ್ಲಿ ದಾಖಲಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿವರಗಳನ್ನು ‘ಕರ್ತವ್ಯ’ ಆ್ಯಪ್ಗೆ ಸಂಯೋಜಿಸಲಾಗಿದೆ.
ಆದರೆ, ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಆ್ಯಪ್ ಅನ್ನು ನಿಯಮಿತವಾಗಿ ಬಳಸುತ್ತಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಸರ್ಕಾರದ ಪ್ರಮುಖ ನಿರ್ದೇಶನಗಳು
- ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಗೆ ‘ಕರ್ತವ್ಯ’ ಆ್ಯಪ್ನಲ್ಲಿ Check-In ಮಾಡಬೇಕು.
- ಕಚೇರಿಯಿಂದ ನಿರ್ಗಮಿಸುವ ವೇಳೆ ಕಡ್ಡಾಯವಾಗಿ Check-Out ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
- ಇ-ಆಡಳಿತ ಇಲಾಖೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು AI ಆಧಾರಿತ ವ್ಯವಸ್ಥೆಯ ಮೂಲಕ ಸಂಬಂಧಿತ ಇಲಾಖೆಗಳ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸಲಿದೆ.
- ಹಾಜರಾತಿ ಮೇಲ್ವಿಚಾರಣೆ ಹಾಗೂ ವರದಿ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ನಿರ್ವಹಿಸಲಾಗುತ್ತದೆ.
ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಆಧಾರಿತ ಆ್ಯಪ್ ಮೂಲಕ ಹಾಜರಾತಿ ನಿರ್ವಹಣೆ ಜಾರಿಯಲ್ಲಿದ್ದು, ಇದೀಗ ಇದೇ ವ್ಯವಸ್ಥೆಯನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ವಿಸ್ತರಿಸಲಾಗಿದೆ.
ಸರ್ಕಾರದ ಈ ಹೊಸ ಕ್ರಮದಿಂದ ಸರ್ಕಾರಿ ಕಚೇರಿಗಳಲ್ಲಿ ಸಮಯಪಾಲನೆ, ಕಾರ್ಯಕ್ಷಮತೆ ಹಾಗೂ ಆಡಳಿತಾತ್ಮಕ ಪಾರದರ್ಶಕತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.



