ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಪ್ರಸಕ್ತ ಸಾಲಿನ ಪ್ರತಿಭಾ ಪುರಸ್ಕಾರ, ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಗೌರವ ಸಮರ್ಪಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜೂನ್ 7ರಂದು ಹಮ್ಮಿಕೊಳ್ಳಲಾಗಿದೆ.
ನಗರದ ಸಂಭಾಪುರ ರಸ್ತೆಯ ಶಂಕರಮಠ ಸಾಂಸ್ಕೃತಿಕ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದಿಕ ವಿದ್ವಾಂಸರಾದ ರತ್ನಾಕರಭಟ್ ಜೋಶಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಎಚ್. ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್. ರಘುನಾಥ, ಆಸುಗೋಡು ಜಯಸಿಂಹ, ಹಾಸ್ಯ ಕಲಾವಿದ ನರಸಿಂಹ ಜೋಶಿ, ಗುರುರಾಜ ಬಳಗಾನೂರ, ಡಾ. ಕುಶಾಲ ಗೋಡಖಿಂಡಿ, ಶ್ರೀನಿವಾಸ ಹುಯಿಲಗೋಳ, ಡಾ. ಜಿ.ಆರ್. ನೆರ್ಲೆಕರ, ದತ್ತಾತ್ರಯ ಜೋಶಿ, ಎನ್.ಆರ್. ಕುಲಕರ್ಣಿ ಹಾಗೂ ಕೃಷ್ಣ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಅಧಿಕ ಮಾಸದ ಅಂಗವಾಗಿ ಜಿಲ್ಲೆಯ ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಕುಂಕುಮಾರ್ಚನೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಗಂಗಾವತಿಯ ಪ್ರಸಿದ್ಧ ನಗೆ ಭಾಷಣಕಾರ ನರಸಿಂಹ ಜೋಶಿ ಅವರಿಂದ ನಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರತ್ನಾಕರಭಟ್ ಜೋಶಿ, ಶ್ರೀನಿವಾಸ ಹುಯಿಲಗೋಳ, ರಾಮಚಂದ್ರ ಮೊನೆ, ರವೀಂದ್ರ ಜೋಶಿ, ಶ್ರೀಪಾದ, ಕಿರಣ ಪೂಜಾರ, ಅನಿಲ ತೆಂಬದಮನಿ, ಅನಿಲ ಪುರಾಣಿಕ ಹಾಗೂ ದತ್ತಣ್ಣ ಜೋಶಿ ಉಪಸ್ಥಿತರಿದ್ದರು.
“ನೂತನ ಸಚಿವ ಸಂಪುಟದ ಮೊದಲ ಹಂತದಲ್ಲಿ ಬ್ರಾಹ್ಮಣ ಸಮಾಜಕ್ಕೆ ಯಾವುದೇ ಸಚಿವ ಸ್ಥಾನ ದೊರೆತಿಲ್ಲ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು”
ವೆಂಕಟೇಶ ಕುಲಕರ್ಣಿ
ವಿದ್ಯಾರ್ಥಿಗಳಿಗೆ ₹1 ಲಕ್ಷ ಶಿಷ್ಯವೇತನ
ಬ್ರಾಹ್ಮಣ ಸಮಾಜದ ಮುಖಂಡ ಗುರುರಾಜ ಬಳಗಾನೂರ ಮಾತನಾಡಿ, “ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಸಮಾಜದ ಜನರಿಗೆ ಈಗಾಗಲೇ ₹1 ಕೋಟಿಗೂ ಅಧಿಕ ಸಾಲ ಸೌಲಭ್ಯ ನೀಡಲಾಗಿದೆ. ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ₹1 ಲಕ್ಷ ಶಿಷ್ಯವೇತನ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಸಮಾಜದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು” ಎಂದು ತಿಳಿಸಿದರು.



