ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಈ ಬಾರಿ ಪದವಿ ಪರೀಕ್ಷಾ ಕಾರ್ಯ ಹಾಗೂ ಮೌಲ್ಯಮಾಪನ ಕಾರ್ಯವನ್ನು ರಾಜ್ಯಾದ್ಯಂತ ಬಹಿಷ್ಕರಿಸುವ ಮೂಲಕ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷಾ ನಿರ್ವಹಣೆಗೆ ಅಡಚಣೆ ಉಂಟಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆ ಎದುರಾಗಿದೆ.
2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಐದು ಹಂತದ ಕೌನ್ಸೆಲಿಂಗ್ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿತ್ತು. ಶೈಕ್ಷಣಿಕ ಅರ್ಹತೆಗೆ ಆದ್ಯತೆ ನೀಡಿ ನೇಮಕ ಪ್ರಕ್ರಿಯೆ ನಡೆಸಲಾಗಿದ್ದು, ಕೆಲ ಕೋರ್ಸ್ಗಳಿಗೆ ಅನುಭವ ಆಧಾರದ ಮೇಲೆ ನಾನ್-ಯುಜಿಸಿ ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಈ ಬಾರಿ ನಕಲಿ ದಾಖಲೆಗಳ ಹಾವಳಿ ತಪ್ಪಿಸಲು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಇದರ ಪರಿಣಾಮ ಕೆಲವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದು, ಪ್ರಕ್ರಿಯೆ ಇನ್ನೂ ಮುಂದುವರಿದಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವರ್ಷದ ಅಂತ್ಯದ ಅವಧಿ ಏಕರೂಪದಲ್ಲಿಲ್ಲ. ಕೆಲವು ವಿವಿಗಳಲ್ಲಿ ಎಪ್ರಿಲ್, ಇನ್ನೂ ಕೆಲವು ಕಡೆ ಮೇ ಹಾಗೂ ಜೂನ್ ತಿಂಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ಸೇವೆಯಿಂದ ಬಿಡುಗಡೆಗೊಂಡಿರುವ ಉಪನ್ಯಾಸಕರು ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಪ್ರಶ್ನೆಪತ್ರಿಕೆ ಸಿದ್ಧತೆ, ಬಿಒಇ, ಸ್ಕ್ವಾಡ್ ಮೊದಲಾದ ಪರೀಕ್ಷಾ ಕಾರ್ಯಗಳಲ್ಲಿ ಬಳಸದೇ ಇರುವ ಧೋರಣೆ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದೆ. “ಪಾಠ ಮಾಡುವಾಗ ಸಮಸ್ಯೆಯಾಗದವರು ಪ್ರಶ್ನೆಪತ್ರಿಕೆ ಸಿದ್ಧಪಡಿಸುವಾಗ ಸಮಸ್ಯೆಯಾಗುತ್ತಾರೆಯೇ?” ಎನ್ನುವುದು ಅವರ ಪ್ರಶ್ನೆ.
ಅತಿಥಿ ಉಪನ್ಯಾಸಕರನ್ನು ಕೆಲವೆಡೆ ಕಾಯಂ ಬೋಧಕರು ‘ಜೀತದಾಳು’ಗಳಂತೆ ಕಾಣುತ್ತಿರುವುದು ಬೇಸರ ತಂದಿದೆ. ಹತ್ತು ತಿಂಗಳು ಸೇವೆಯಲ್ಲಿ ಮುಂದುವರಿಸಿ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಇದೀಗ ಕೆಲವು ಕಾಲೇಜುಗಳಲ್ಲಿ ಪರೀಕ್ಷೆಗಳು ಆರಂಭಗೊಂಡಿದ್ದು, ಪರೀಕ್ಷಾ ಕಾರ್ಯ ನಿರ್ವಹಣೆಗೆ ಪ್ರಾಚಾರ್ಯರು ಪರದಾಡುವಂತಾಗಿದೆ. ಪರ್ಯಾಯವಾಗಿ ಖಾಸಗಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಪರೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಮೌಲ್ಯಮಾಪನ ಕಾರ್ಯವನ್ನು ಹೇಗೆ ನಿರ್ವಹಿಸುವುದು ಎಂಬುದು ವಿಶ್ವವಿದ್ಯಾಲಯಗಳಿಗೆ ದೊಡ್ಡ ಸವಾಲಾಗಿದೆ.
“ರಾಜ್ಯ ಸಂಘಟನೆಯ ಕರೆಯ ಮೇರೆಗೆ ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿದ್ದೇವೆ. ಕೆಲವರು ಬೆದರಿಕೆಗೆ ಹೆದರಿ ಕೆಲಸಕ್ಕೆ ಹಾಜರಾಗಿರುವುದು ಗೊತ್ತಾಗಿದೆ. ಯಾವುದಕ್ಕೂ ಅಂಜಬೇಡಿ. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯುತ್ತದೆ.”
ಡಾ. ವೀರಣ್ಣ ಸಜ್ಜನರ
“ಜೂನ್ವರೆಗೂ ಸೇವೆಯಲ್ಲಿ ಮುಂದುವರಿಸಿದರೆ ಪರೀಕ್ಷಾ ಕಾರ್ಯದಲ್ಲಿ ಕೈಜೋಡಿಸುತ್ತೇವೆ. ಮನೆಯಿಂದ ಹೊರಗೆ ನೂಕಿ ಮನೆ ಕೆಲಸ ಮಾಡು ಎಂದರೆ ಹೇಗೆ ಸಾಧ್ಯ? ಗೌರವದಿಂದ ನಡೆಸಿಕೊಳ್ಳುವ ಪ್ರಾಚಾರ್ಯರೂ ಇದ್ದಾರೆ. ಕೆಲವರು ಸೇವಾ ಪ್ರಮಾಣ ಪತ್ರ ನೀಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ.”
ಡಾ. ಹನುಮಂತಗೌಡ ಕಲ್ಮನಿ
“ಜೂನ್ 4 ಮತ್ತು 5ರಂದು ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗುವ ಪರೀಕ್ಷೆಗಳಿದ್ದವು. ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಯಿತು. ಪರ್ಯಾಯವಾಗಿ ಖಾಸಗಿ ಪಿಯು ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಂಡಿದ್ದೇವೆ. ಸದ್ಯ ಪರೀಕ್ಷೆಗಳು ಸುಗಮವಾಗಿ ನಡೆದಿವೆ.”
ಪ್ರೊ. ವೈ.ಬಿ. ಅಂಗಡಿ
“ಕೊಪ್ಪಳ ವಿವಿ ವ್ಯಾಪ್ತಿಯ ಗಂಗಾವತಿ ಹಾಗೂ ಕೊಪ್ಪಳ ಕಾಲೇಜುಗಳಲ್ಲಿ ಹೆಚ್ಚಿನ ಪರೀಕ್ಷಾ ಕೊಠಡಿಗಳಿವೆ. ಅಲ್ಲಿ ಸ್ವಲ್ಪ ತೊಂದರೆ ಆಗಬಹುದು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರದ ಉನ್ನತಾಧಿಕಾರಿಗಳಿಗೆ ತಿಳಿಸಿದ್ದೇವೆ.”
ಡಾ. ಎಸ್.ವಿ. ಡಾಣಿ



