ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿರುವ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ತಿಳಿಸಿದ್ದರೂ, ಸದ್ಯಕ್ಕೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ರಾಜೀನಾಮೆ ಹಿಂಪಡೆಯುವ ಸಾಧ್ಯತೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆದಿರುವುದನ್ನು ಖಚಿತಪಡಿಸಿದರು.
ನಿನ್ನೆ ನಾನು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸುರ್ಜೇವಾಲಾ ಅವರು ಕರೆ ಮಾಡಿದ್ದರು. ಇಂದು ಬೆಳಗ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ನಿನ್ನೆ ಸಿಎಂ ಅವರು ಮನೆಗೆ ಬರುತ್ತೇನೆ ಎಂದಿದ್ದರು. ನಾನು ಹೋಟೆಲ್‌ನಲ್ಲಿ ಇದ್ದ ಕಾರಣ ಅಲ್ಲಿಯೇ ಬಂದು ಭೇಟಿಯಾದರು ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಇಬ್ಬರೂ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ಹೇಳಿರುವುದಾಗಿ ಅವರು ತಿಳಿಸಿದರು. ಆದರೆ, ತಮಗೆ ನೀಡಲಾಗಿರುವ ನೀರಾವರಿ ಇಲಾಖೆಯ ಕುರಿತು ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ, ಮುಂದಿನ ಬೆಳವಣಿಗೆಗಳನ್ನು ಗಮನಿಸುವುದಾಗಿ ಹೇಳಿದರು.
“2023 ಹಾಗೂ 2026ರಲ್ಲಿ ಎರಡು ಬಾರಿ ನನಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಅದು ಈಡೇರಿಲ್ಲ. ಇದೀಗ ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಮುಂದಿನ ನಿರ್ಧಾರ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ,” ಎಂದು ಅವರು ಹೇಳಿದರು.
ಇದೇ ವೇಳೆ, ಇಂದು ಸಂಜೆಯೊಳಗೆ ಈ ಗೊಂದಲಕ್ಕೆ ಪರಿಹಾರ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ರಾಮಲಿಂಗಾ ರೆಡ್ಡಿ, ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ನೋಡುವಂತೆ ಕರೆ ನೀಡಿದರು.
ನಕಾರಾತ್ಮಕವಾಗಿ ಯೋಚಿಸುವ ಅಗತ್ಯವಿಲ್ಲ. ಸಕಾರಾತ್ಮಕ ಬೆಳವಣಿಗೆ ಆಗುವ ನಿರೀಕ್ಷೆ ಇದೆ. ಸಿಎಂ ಹಾಗೂ ಸುರ್ಜೇವಾಲಾ ಅವರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮತ್ತೆ ಮಾತುಕತೆಗೆ ಕರೆದರೆ ಖಂಡಿತವಾಗಿ ಹೋಗುತ್ತೇನೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.



