ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ವೇಳೆ ನಡೆಯುವ ಅಂಬಾರಿಗೆ ಪುಷ್ಪಾರ್ಚನೆ ಹಾಗೂ ನಂದಿಧ್ವಜ ಪೂಜೆಯಲ್ಲಿ ಭಾಗವಹಿಸುವ ಗಣ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಕಡಿಮೆ ಸಂಖ್ಯೆಯ ಜನರು ಭಾಗವಹಿಸುವುದು ಉತ್ತಮ. ಮುಖ್ಯಮಂತ್ರಿ ಜೊತೆಗೆ ಒಂದಿಬ್ಬರು ಗಣ್ಯರು ಇದ್ದರೆ ಸಾಕು ಎಂದು ಹೇಳಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ದಸರಾ ಕಾರ್ಯಕ್ರಮಗಳಲ್ಲಿ ಅನುಸರಿಸಬೇಕಾದ ಶಿಷ್ಟಾಚಾರದ ಕುರಿತು ಸರ್ಕಾರ ಸ್ಪಷ್ಟ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಅಂಬಾರಿ ಪುಷ್ಪಾರ್ಚನೆಗೆ ಎಲ್ಲರೂ ಯಾಕೆ ಹೋಗಬೇಕು?
ದಸರಾ ಶಿಷ್ಟಾಚಾರದ ಕುರಿತು ಪ್ರತಿಕ್ರಿಯಿಸಿದ ಯದುವೀರ್ ಒಡೆಯರ್, ಮೊದಲು ಶಿಷ್ಟಾಚಾರ ಎಂದರೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಸದ್ಯ ಇಂತಹ ಶಿಷ್ಟಾಚಾರ ಇದೆಯೋ ಇಲ್ಲವೋ ಎಂಬುದೇ ತಿಳಿದಿಲ್ಲ ಎಂದು ಹೇಳಿದರು.
ಅಂಬಾರಿಗೆ ಪುಷ್ಪಾರ್ಚನೆ ಹಾಗೂ ನಂದಿಧ್ವಜ ಪೂಜೆಯಂತಹ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಸೇರುವ ಅಗತ್ಯವಿಲ್ಲ. ಮುಖ್ಯಮಂತ್ರಿ ಜೊತೆಗೆ ಒಂದಿಬ್ಬರು ಗಣ್ಯರು ಭಾಗವಹಿಸಿದರೆ ಸಾಕು. ಎಲ್ಲರೂ ಅಲ್ಲಿಗೆ ಹೋಗುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ದಸರಾ ಮಹೋತ್ಸವದ ಪ್ರತಿಯೊಂದು ಧಾರ್ಮಿಕ ವಿಧಿವಿಧಾನಕ್ಕೂ ಅದರದ್ದೇ ಆದ ಸಂಪ್ರದಾಯ ಮತ್ತು ಮಹತ್ವವಿದೆ. ಹೀಗಾಗಿ ಕಾರ್ಯಕ್ರಮಗಳಲ್ಲಿ ಯಾರು ಭಾಗವಹಿಸಬೇಕು, ಎಷ್ಟು ಮಂದಿ ಉಪಸ್ಥಿತರಿರಬೇಕು ಎಂಬುದರ ಕುರಿತು ಸ್ಪಷ್ಟ ನಿಯಮಗಳನ್ನು ಸರ್ಕಾರ ರೂಪಿಸಬೇಕು ಎಂದು ಸಲಹೆ ನೀಡಿದರು.
ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದರಲ್ಲಿ ತಪ್ಪಿಲ್ಲ!
ಇದೇ ವೇಳೆ ಜಂಬೂಸವಾರಿ ಪುಷ್ಪಾರ್ಚನೆಗೆ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಿರುವ ವಿಚಾರದ ಕುರಿತು ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದರು.
ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳನ್ನು ದಸರಾ ಮಹೋತ್ಸವಕ್ಕೆ ಆಹ್ವಾನಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಒಮ್ಮೆ ಅವರನ್ನು ಅತಿಥಿಗಳಾಗಿ ಆಹ್ವಾನಿಸಿದ ಬಳಿಕ ಪುಷ್ಪಾರ್ಚನೆ ಕಾರ್ಯಕ್ರಮದಿಂದ ಹೊರಗಿಟ್ಟರೆ ಅದು ಸರಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಆದರೆ ಆಹ್ವಾನಿತ ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಇತರ ಗಣ್ಯರು ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕುರಿತು ಸರ್ಕಾರವೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ದಸರಾ ಶಿಷ್ಟಾಚಾರಕ್ಕೆ ಸ್ಪಷ್ಟ ನಿಯಮ ರೂಪಿಸಿ
ದಸರಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಈಗ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿದರೂ ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಸಾಧ್ಯತೆಯಿದೆ. ಹೀಗಾಗಿ ಅನಗತ್ಯ ರಾಜಕೀಯ ಚರ್ಚೆಗಿಂತ ಸ್ಪಷ್ಟ ಶಿಷ್ಟಾಚಾರ ರೂಪಿಸುವುದು ಮುಖ್ಯ ಎಂದು ಯದುವೀರ್ ಒಡೆಯರ್ ತಿಳಿಸಿದರು.
ವಿಶೇಷವಾಗಿ ನಂದಿಧ್ವಜ ಪೂಜೆ ಮತ್ತು ಅಂಬಾರಿ ಪುಷ್ಪಾರ್ಚನೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಶಿಷ್ಟಾಚಾರ ರೂಪಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಗೊಂದಲಗಳು ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.









