ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಡಾ. ಎಚ್.ಕೆ. ಪಾಟೀಲರಿಗೆ ಸ್ಥಾನ ಕೈತಪ್ಪಿರುವ ವಿಚಾರಕ್ಕೆ ಉತ್ತರ ಕರ್ನಾಟಕದಲ್ಲಿ ಅಸಮಾಧಾನ ಜೋರಾಗಿದ್ದು, ಕಾಂಗ್ರೆಸ್ ಯುವ ಮುಖಂಡ ಶ್ರೀಧರ ವಜ್ರಬಂಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಧಿಕಾರ ಎಂಬುದು ಗರ್ವದ ಸಂಕೇತವಲ್ಲ, ಅದು ಸಮಾಜ ಸೇವೆಯ ಹೊಣೆಗಾರಿಕೆ” ಎಂಬ ತತ್ವದೊಂದಿಗೆ ರಾಜಕೀಯ ನಡೆಸಿದ ಎಚ್.ಕೆ. ಪಾಟೀಲರಂತಹ ಜನಪರ ನಾಯಕನನ್ನು ಸಚಿವ ಸಂಪುಟದಿಂದ ದೂರ ಇಡುವುದು ಸರಿಯಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಂತೆ ಜನಸಾಮಾನ್ಯರ ಸೇವೆಯನ್ನೇ ರಾಜಕೀಯ ಧರ್ಮವನ್ನಾಗಿಸಿಕೊಂಡಿರುವ ನಾಯಕ ಎಚ್.ಕೆ. ಪಾಟೀಲರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎನ್ನುವ ಬದ್ಧತೆಯಿಂದ ಅವರು ಕೆಲಸ ಮಾಡಿದ್ದಾರೆ. ಅಂತಹ ಅನುಭವಿ ಹಾಗೂ ಪಕ್ಷ ನಿಷ್ಠ ನಾಯಕನನ್ನು ಕಡೆಗಣಿಸಿರುವುದು ಉತ್ತರ ಕರ್ನಾಟಕದ ಜನತೆಗೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಎಚ್.ಕೆ. ಪಾಟೀಲರ ಪಾತ್ರ ಅಪಾರವಾಗಿದೆ. ಪಕ್ಷದ ಮೊದಲ ಸಾಲಿನ ನಾಯಕರನ್ನೇ ಕಡೆಗಣಿಸಿದರೆ ಅದು ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ಕೂಡಲೇ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಅವರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಶ್ರೀಧರ ವಜ್ರಬಂಡಿ ಎಚ್ಚರಿಕೆ ನೀಡಿದರು.
ಸಚಿವರಾಗಿದ್ದ ಅವಧಿಯಲ್ಲಿ ಎಚ್.ಕೆ. ಪಾಟೀಲರು ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ರಾಜ್ಯಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಯೋಜನೆಗಳನ್ನು ದೇಶದ ಅನೇಕ ರಾಜ್ಯಗಳು ಮಾದರಿಯಾಗಿ ಅಳವಡಿಸಿಕೊಂಡಿವೆ ಎಂದು ಹೇಳಿದರು.
ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಎಚ್.ಕೆ. ಪಾಟೀಲರು ವಿಶೇಷ ಪರಿಶ್ರಮಪಟ್ಟಿದ್ದಾರೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಐತಿಹಾಸಿಕ ಪ್ರಾಚ್ಯಾವಶೇಷಗಳ ಸಂರಕ್ಷಣೆ ಹಾಗೂ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ರಾಜ್ಯದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.
“ಜನಪರ ಕಾಳಜಿ, ಆಡಳಿತ ಅನುಭವ ಮತ್ತು ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಮುತ್ಸದ್ದಿ ರಾಜಕಾರಣಿಯನ್ನು ಕಡೆಗಣಿಸಿರುವುದು ಅಕ್ಷಮ್ಯ” ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಶ್ರೀಧರ ವಜ್ರಬಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅಧಿಕಾರ ಎಂದರೆ ಹುದ್ದೆಯ ಅಹಂಕಾರವಲ್ಲ; ಜನರ ಕಣ್ಣೀರನ್ನು ಒರೆಸುವ ಜವಾಬ್ದಾರಿ. ಅಂತಹ ಜನಪರ ನಾಯಕ ಎಚ್.ಕೆ. ಪಾಟೀಲರನ್ನೇ ಸಚಿವ ಸಂಪುಟದಿಂದ ದೂರ ಇಟ್ಟಿರುವುದು ಉತ್ತರ ಕರ್ನಾಟಕದ ಆತ್ಮಗೌರವಕ್ಕೆ ಮಾಡಿದ ಅನ್ಯಾಯ.”
— ಶ್ರೀಧರ ವಜ್ರಬಂಡಿ



