ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ಗ್ರಾಹಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ತರಕಾರಿ ದರ ಏರಿಕೆಯ ನಡುವೆಯೇ ಇದೀಗ ಅಕ್ಕಿ ಬೆಲೆಯೂ ಗಣನೀಯವಾಗಿ ಹೆಚ್ಚಳವಾಗಿದ್ದು, ಕುಟುಂಬಗಳ ಮಾಸಿಕ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ಬೀಳುವಂತಾಗಿದೆ.
ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಕ್ಕಿಗಳ ದರದಲ್ಲಿ ಕೆಜಿಗೆ ₹10ರಿಂದ ₹20ರವರೆಗೆ ಏರಿಕೆ ದಾಖಲಾಗಿದ್ದು, ಗ್ರಾಹಕರು ಹೆಚ್ಚುವರಿ ಹಣ ಪಾವತಿಸಿ ಅಕ್ಕಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಾಗಿರುವುದು ಮತ್ತು ಪೂರೈಕೆ ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇದರ ಜೊತೆಗೆ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕುಂಠಿತವಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಹೊಸ ಅಕ್ಕಿ ಬೆಳೆ ನವೆಂಬರ್ ತಿಂಗಳ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಅಲ್ಲಿಯವರೆಗೆ ಪೂರೈಕೆ ಕೊರತೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ.
ವಿವಿಧ ತಳಿಯ ಅಕ್ಕಿ ಹೊಸ ದರಗಳು
- ಸ್ಟೀಮ್ ರೈಸ್ – ಕೆಜಿಗೆ ₹42ರಿಂದ ₹56ಕ್ಕೆ ಏರಿಕೆ
- ರಾ ರೈಸ್ – ಕೆಜಿಗೆ ₹50ರಿಂದ ₹62ಕ್ಕೆ ಹೆಚ್ಚಳ
- ಕೋಲಂ ರೈಸ್ – ಕೆಜಿಗೆ ₹68ರಿಂದ ₹80ಕ್ಕೆ ಜಿಗಿತ
- ಕೋಲಂ ಸ್ಟೀಮ್ ರೈಸ್ – ಕೆಜಿಗೆ ₹55ರಿಂದ ₹65ಕ್ಕೆ ಏರಿಕೆ
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಆರ್ಥಿಕ ಒತ್ತಡ ಅನುಭವಿಸುತ್ತಿದ್ದು, ಅಕ್ಕಿ ದರ ಹೆಚ್ಚಳ ಮತ್ತಷ್ಟು ಸಂಕಷ್ಟ ಸೃಷ್ಟಿಸಿದೆ. ದಿನನಿತ್ಯದ ಜೀವನ ನಿರ್ವಹಣೆಯ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಕುಟುಂಬದ ಬಜೆಟ್ ಸಮತೋಲನ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



