ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಮತ್ತೊಂದು ರಾಜಕೀಯ ಹಿನ್ನಡೆಯಾಗಿದ್ದು, ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವೇಳೆ ಮತ್ತೋರ್ವ ರಾಜ್ಯಸಭಾ ಸದಸ್ಯೆ ಕೋಯೆಲ್ ಮಲ್ಲಿಕ್ ಕೂಡ ಶೀಘ್ರದಲ್ಲೇ ಸದಸ್ಯತ್ವ ತ್ಯಜಿಸಲಿದ್ದಾರೆ ಎನ್ನುವ ಮಾಹಿತಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯಸಭೆಯಲ್ಲಿ ಟಿಎಂಸಿಯ ಪ್ರಮುಖ ಧ್ವನಿಗಳಲ್ಲಿ ಒಬ್ಬರಾಗಿದ್ದ ಸುಖೇಂದು ಶೇಖರ್ ರಾಯ್ ಅವರ ನಿರ್ಗಮನವು ಪಕ್ಷಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಪಕ್ಷದೊಳಗಿನ ಅಸಮಾಧಾನ ಮತ್ತು ಬಂಡಾಯ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಸ್ತುತ ರಾಜ್ಯಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಟಿಎಂಸಿ, ರಾಯ್ ಹಾಗೂ ಕೋಯೆಲ್ ಮಲ್ಲಿಕ್ ರಾಜೀನಾಮೆ ನೀಡಿದರೆ ತನ್ನ ಸದಸ್ಯ ಬಲವನ್ನು 11ಕ್ಕೆ ಕಳೆದುಕೊಳ್ಳಲಿದೆ.
ರಾಜೀನಾಮೆ ಪತ್ರದಲ್ಲಿ ಸುಖೇಂದು ಶೇಖರ್ ರಾಯ್, ಭ್ರಷ್ಟಾಚಾರ, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಹೆಚ್ಚಳ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಉದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರ್ಕಾರ ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಸಾಧನೆಯನ್ನು ಐತಿಹಾಸಿಕ ಜನಾದೇಶ ಎಂದು ಬಣ್ಣಿಸಿರುವ ಅವರು, ಜನರ ತೀರ್ಪಿಗೆ ಗೌರವ ಸೂಚಿಸುವ ಉದ್ದೇಶದಿಂದ ತೃಣಮೂಲ ಕಾಂಗ್ರೆಸ್ ಹಾಗೂ ರಾಜ್ಯಸಭೆ ಎರಡಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.



