ವಿಜಯಸಾಕ್ಷಿ ಸುದ್ದಿ, ಗದಗ: ಕಿಡ್ನಿ ಕಸಿಗಾಗಿ ತಾವು ಅನುಭವಿಸಿದ ಸಂಕಷ್ಟ ಮತ್ತೊಬ್ಬರಿಗೆ ಎದುರಾಗಬಾರದು ಎಂಬ ಮಾನವೀಯ ಚಿಂತನೆಯಿಂದ ಹುಲಕೋಟಿಯಲ್ಲಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ನಿರ್ಮಿಸಿದ ಕೆ.ಎಚ್. ಪಾಟೀಲರ ಸಂಕಲ್ಪ ಸಮಾಜಕ್ಕೆ ಮಾದರಿಯಾಗಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಹುಲಕೋಟಿಯ ದಿ ರೂರಲ್ ಮೆಡಿಕಲ್ ಸರ್ವೀಸ್ ಸೊಸೈಟಿಯ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಗೆ ಶನಿವಾರ ಭೇಟಿ ನೀಡಿದ ಅವರು, ಆಸ್ಪತ್ರೆಯ ಸೇವಾ ಕಾರ್ಯವನ್ನು ಶ್ಲಾಘಿಸಿ ಆಶೀರ್ವಚನ ನೀಡಿದರು.
ಆಸ್ಪತ್ರೆಯ ಸೇವಾ ಕಾರ್ಯವನ್ನು ಮೆಚ್ಚಿದ ಶ್ರೀಗಳು, “ಮನುಷ್ಯನ ಬದುಕಿಗೆ ಸೇವೆಯೇ ಶ್ರೇಷ್ಠ ಧರ್ಮ. ತಾನು ಅನುಭವಿಸಿದ ನೋವನ್ನು ಸಮಾಜದ ಮತ್ತೊಬ್ಬರು ಅನುಭವಿಸಬಾರದು ಎನ್ನುವ ಮನಸ್ಸೇ ದೊಡ್ಡ ಸಂಪತ್ತು” ಎಂದು ಹೇಳಿದರು.
ಒಬ್ಬ ಬಡ ಮಹಿಳೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ, ತನ್ನಂತ ನೋವು ಮತ್ತೊಬ್ಬರಿಗೆ ಆಗಬಾರದು ಎಂದು ಕಾಯಿಪಲ್ಲೆ ಮಾರಾಟದಿಂದ ಉಳಿಸಿದ ಹಣದಲ್ಲಿ ಗ್ರಾಮದಲ್ಲಿ ಆಸ್ಪತ್ರೆ ಕಟ್ಟಿಸಿದ ಘಟನೆಯನ್ನು ಉದಾಹರಿಸಿದ ಶ್ರೀಗಳು, “ಇಂತಹ ಮನಸ್ಸುಗಳೇ ಸಮಾಜವನ್ನು ಉಳಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಮಣ ಮಹರ್ಷಿಗಳ ತ್ಯಾಗ ಮನೋಭಾವವನ್ನು ಸ್ಮರಿಸಿದ ಅವರು, “ಬದುಕಿರುವ ತನಕ ಈ ದೇಹದಿಂದ ಇನ್ನೊಬ್ಬ ಜೀವಿಯಾದರೂ ಬದುಕಲಿ ಎನ್ನುವ ಭಾವನೆ ಮನುಷ್ಯನಲ್ಲಿ ಬರಬೇಕು” ಎಂದು ಕಿವಿಮಾತು ಹೇಳಿದರು.
ಆಸ್ಪತ್ರೆ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಆರಂಭಿಸಿದ ಶ್ರೀಗಳು, ಬಳಿಕ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಪತ್ರಕರ್ತ ಹನುಮಂತ ಹಳ್ಳಿಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.
“ಬಹುವರ್ಷಗಳ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ್ದು ಸಂತೋಷ ತಂದಿದೆ. ಆಸ್ಪತ್ರೆಯ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತಾರವಾಗಲಿ” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಅವಿನಾಶ ಓದುಗೌಡ್ರ, ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವೇಮನ ಸಾಹುಕಾರ, ಡಾ. ಪ್ಯಾರ್ ಅಲಿ ನೂರಾನಿ, ಡಾ. ದೀಪಕ, ಕಾನಿಪ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಶರಣು ದೊಡ್ಡೂರ, ವೆಂಕಟೇಶ ಇಮರಾಪೂರ, ರಘೋತ್ತಮ ಕೊಪ್ಪರ, ಸುರೇಶ ಕಡ್ಲಿಮಟ್ಟಿ, ಹರೀಶ್ ಹೆಚ್.ಎಸ್., ಸಂತೋಷ ದೇಶಪಾಂಡೆ, ಮೌಲಾಹುಸೇನ್ ಬುಲ್ಡಿಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



