ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಐಶ್ವರ್ಯ ನಾಗರಾಳ ಅವರ ನೇತೃತ್ವದಲ್ಲಿ ಸಿಬ್ಬಂದಿಯವರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಸ್‌ಐ ಐಶ್ವರ್ಯ ನಾಗರಾಳ, ಸಾರ್ವಜನಿಕ ಸೇವೆಯಲ್ಲಿ ದಿನದ 24 ಗಂಟೆಯೂ ತೊಡಗಿರುವ ಪೊಲೀಸ್ ಸಿಬ್ಬಂದಿಗೆ ಉತ್ತಮ ಆರೋಗ್ಯ ಅತ್ಯಗತ್ಯ. ಶುದ್ಧ ಗಾಳಿ ಮತ್ತು ಆಮ್ಲಜನಕಕ್ಕಾಗಿ ಪರಿಸರ ಸಂರಕ್ಷಣೆ ಅವಶ್ಯವಾಗಿದ್ದು, ಠಾಣಾ ಆವರಣದಲ್ಲಿ ಸಸ್ಯಕಾಶಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ಸುತ್ತಲಿನ ಪರಿಸರವೂ ಸ್ವಚ್ಛವಾಗಿರಬೇಕು ಎಂದು ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.
ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿ, ಪೊಲೀಸ್ ಇಲಾಖೆಯವರು ಸಸ್ಯೋದ್ಯಾನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಎಸ್‌ಐ ಎಂ.ಆರ್. ಬಾರಕೇರ, ಆರ್.ಎಸ್. ಕಪ್ಪತ್ತನವರ, ಪಿ.ಕೆ. ದಾಸರ, ವಿ.ಎಸ್. ಗೋದಿಗನೂರ, ಬಿ.ಎಸ್. ಮಾಯಮ್ಮನವರ, ಯು.ಎಂ. ಬಂಗಾರಿ, ಮಂಜುನಾಥ ಮಾದರ, ರೋಷನ್ ಜಮೀರ, ಶಾಂತಕುಮಾರ ವಡ್ಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



