ಗದಗ:- ಸಾರಿಗೆ ಬಸ್ ನ ಹಿಂಬದಿ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಗದಗ ನಗರದಲ್ಲಿ ಜರುಗಿದೆ.
ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗದಗದಿಂದ ಗಜೇಂದ್ರಗಡಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಾದು ಹೋಗುತ್ತಿದ್ದ ವೇಳೆ, ಬೈಕ್ ನಿಲ್ಲಿಸಿದ ವ್ಯಕ್ತಿ ಆಕಸ್ಮಿಕವಾಗಿ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡಿದ್ದಾನೆ. ಪರಿಣಾಮವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಬಸ್ ಹಾಗೂ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಅಪಘಾತದ ಬಗ್ಗೆ ಸ್ಪಷ್ಟತೆ ಪಡೆಯಲು ಟ್ರಾಫಿಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಅಪಘಾತವೋ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಘಟನೆ ಸಂಬಂಧ ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.



