ಬಳ್ಳಾರಿ: ಬೇಸಿಗೆಯ ತೀವ್ರತೆಯಿಂದಾಗಿ ನೀರಿನ ಮಟ್ಟ ಕುಸಿದು ಡೆಡ್ ಸ್ಟೋರೇಜ್ ಹಂತ ತಲುಪಿದ್ದ ತುಂಗಭದ್ರಾ ಜಲಾಶಯ ಇದೀಗ ಮುಂಗಾರು ಮಳೆಯ ಕೃಪೆಯಿಂದ ಮತ್ತೆ ಜೀವಂತವಾಗುತ್ತಿದೆ. ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಉತ್ತಮ ಮಳೆಯ ಪರಿಣಾಮ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಕೃಷಿ ಆಧಾರಿತ ಪ್ರದೇಶಗಳಲ್ಲಿ ಆಶಾಭಾವನೆ ಮೂಡಿಸಿದೆ.
ಗರಿಷ್ಠ 101 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 10 ಟಿಎಂಸಿ ನೀರು ಲಭ್ಯವಿದೆ. ಮಲೆನಾಡು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ತುಂಗಭದ್ರಾ ಜಲಾಶಯ ಈ ವರ್ಷ ದಾಖಲೆಯ ವೇಗದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ.
ಕಳೆದ ವರ್ಷ ಮಳೆ ಕೊರತೆಯಿಂದಾಗಿ ರೈತರು ನೀರಿನ ಅಭಾವ ಎದುರಿಸಿದ್ದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ತುಂಗಭದ್ರಾ ನೀರನ್ನು ಅವಲಂಬಿಸಿರುವ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳ ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ವ್ಯಾಪಕ ಕೃಷಿ ಪ್ರದೇಶಗಳಿಗೆ ಇದು ಶುಭಸುದ್ದಿಯಾಗಿದೆ.
ಬಿತ್ತನೆ ಹಂಗಾಮಿನ ಆರಂಭದಲ್ಲೇ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವುದು ರೈತರ ಆತ್ಮವಿಶ್ವಾಸ ಹೆಚ್ಚಿಸಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರಿನ ಭದ್ರತೆ ಸಿಗುವ ನಿರೀಕ್ಷೆ ಬಲಗೊಂಡಿದೆ.



