HomeKarnataka Newsತಾತನಿಂದ ತಂದೆಗೆ ಬಂದ ಆಸ್ತಿಯೆಲ್ಲ ಪಿತ್ರಾರ್ಜಿತವಲ್ಲ: ಮಕ್ಕಳ ಜನ್ಮಸಿದ್ಧ ಹಕ್ಕಿನ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು

ತಾತನಿಂದ ತಂದೆಗೆ ಬಂದ ಆಸ್ತಿಯೆಲ್ಲ ಪಿತ್ರಾರ್ಜಿತವಲ್ಲ: ಮಕ್ಕಳ ಜನ್ಮಸಿದ್ಧ ಹಕ್ಕಿನ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು

For Dai;y Updates Join Our whatsapp Group

ಬೆಂಗಳೂರು: ತಾತನಿಂದ ತಂದೆಗೆ ಬಂದ ಎಲ್ಲ ಆಸ್ತಿಗಳಿಗೂ ಮಕ್ಕಳು ಜನ್ಮಸಿದ್ಧ ಹಕ್ಕು ಹೊಂದಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆಸ್ತಿಯ ಮೂಲ, ಅದು ಹೇಗೆ ಸಂಪಾದನೆಯಾಯಿತು ಹಾಗೂ ಅದರ ಕಾನೂನು ಸ್ವರೂಪದ ಆಧಾರದ ಮೇಲೆಯೇ ಅದು ಪಿತ್ರಾರ್ಜಿತ ಆಸ್ತಿಯೇ ಅಥವಾ ಸ್ವಯಾರ್ಜಿತ ಆಸ್ತಿಯೇ ಎಂಬುದನ್ನು ನಿರ್ಧರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೈಕೋರ್ಟ್ ಅಭಿಪ್ರಾಯದ ಪ್ರಕಾರ, ಹಿಂದೂ ಅವಿಭಕ್ತ ಕುಟುಂಬದ ಕೌಟುಂಬಿಕ ಆಸ್ತಿಯಾಗಿ ತಲೆಮಾರುಗಳಿಂದ ಮುಂದುವರಿದಿರುವ ಹಾಗೂ ಜಂಟಿ ಸ್ವರೂಪವನ್ನು ಉಳಿಸಿಕೊಂಡಿರುವ ಆಸ್ತಿಯನ್ನೇ ಸಾಮಾನ್ಯವಾಗಿ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಆಸ್ತಿಯಲ್ಲಿ ಮಕ್ಕಳಿಗೆ ಹುಟ್ಟಿನಿಂದಲೇ ಹಕ್ಕು ಇರುತ್ತದೆ.

ಆದರೆ, ತಾತ ತಮ್ಮ ಸ್ವಂತ ಆದಾಯ, ದುಡಿಮೆ ಅಥವಾ ಖರೀದಿಯ ಮೂಲಕ ಸಂಪಾದಿಸಿದ ಸ್ವಯಾರ್ಜಿತ ಆಸ್ತಿಯನ್ನು ನಂತರ ತಂದೆ ಪಡೆದಿದ್ದರೂ, ಅದು ಸ್ವಯಂಚಾಲಿತವಾಗಿ ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ವ್ಯಕ್ತಿಯೊಬ್ಬರು ತಮ್ಮ ಆದಾಯ, ಖರೀದಿ, ಉಡುಗೊರೆ, ಉಯಿಲು ಅಥವಾ ವೈಯಕ್ತಿಕ ಪ್ರಯತ್ನದ ಮೂಲಕ ಗಳಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಇಂತಹ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಆ ಮಾಲೀಕರಿಗೇ ಇರುತ್ತದೆ. ಅದನ್ನು ಯಾರಿಗೆ ವರ್ಗಾಯಿಸಬೇಕು ಅಥವಾ ಉಯಿಲು ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವೂ ಅವರಿಗೆ ಇರುತ್ತದೆ.

ಸ್ವಯಾರ್ಜಿತ ಆಸ್ತಿಯನ್ನು ಮಾಲೀಕರು ಸ್ವಯಂಪ್ರೇರಣೆಯಿಂದ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗಿ ಸೇರಿಸಿದರೆ ಅಥವಾ ಅದು ಕುಟುಂಬದ ಸಾಮೂಹಿಕ ಆಸ್ತಿಯ ಸ್ವರೂಪ ಪಡೆದುಕೊಂಡರೆ ಮಾತ್ರ ಅದರ ಕಾನೂನು ಸ್ವರೂಪ ಬದಲಾಗಬಹುದು. ಕೇವಲ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾದ ಕಾರಣಕ್ಕೆ ಮಾತ್ರ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳ ಹಕ್ಕು ಏನು?

ತಂದೆ ಜೀವಂತವಾಗಿರುವವರೆಗೆ ಅವರ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ. ಆದರೆ ತಂದೆ ಉಯಿಲು ಮಾಡದೆ ಮೃತಪಟ್ಟರೆ, ಕಾನೂನುಬದ್ಧ ಉತ್ತರಾಧಿಕಾರಿಗಳಾಗಿ ಮಕ್ಕಳು ಆಸ್ತಿಯಲ್ಲಿ ಪಾಲು ಪಡೆಯಬಹುದು. ತಂದೆ ಉಯಿಲಿನ ಮೂಲಕ ಮಕ್ಕಳಿಗೆ ಪಾಲು ನೀಡಿದ್ದರೂ ಅವರಿಗೆ ಹಕ್ಕು ಸಿಗುತ್ತದೆ.

ಇನ್ನು 2005ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯ ಪ್ರಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರಿಯರಿಗೂ ಪುತ್ರರಷ್ಟೇ ಸಮಾನ ಹಕ್ಕು ಇದೆ. ಆದರೆ ಈ ಕಾಯ್ದೆಯ ಪ್ರಕಾರವೂ ಸ್ವಯಾರ್ಜಿತ ಆಸ್ತಿ ಸ್ವತಃ ಪಿತ್ರಾರ್ಜಿತ ಆಸ್ತಿಯಾಗಿ ಪರಿವರ್ತನೆಯಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕದ ಮಹಿಳೆ ಉಷಾ ಎನ್. ಸ್ವಾಮಿ ಅವರು ತಮ್ಮ ತಾತನ ಆಸ್ತಿಯಲ್ಲಿ ಸಮಾನ ಪಾಲು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ತಾತನ ನಿಧನದ ಬಳಿಕ ಆಸ್ತಿ ತಂದೆಗೆ ಬಂದಿರುವುದರಿಂದ ಅದು ಪಿತ್ರಾರ್ಜಿತ ಆಸ್ತಿಯಾಗಿದೆ ಮತ್ತು ತಮ್ಮಿಗೂ ಜನ್ಮಸಿದ್ಧ ಹಕ್ಕು ಇದೆ ಎಂದು ಅವರು ವಾದಿಸಿದ್ದರು.

ಆದರೆ, ಆ ಆಸ್ತಿ ಮೂಲತಃ ತಾತನ ಸ್ವಯಾರ್ಜಿತ ಆಸ್ತಿಯಾಗಿದ್ದು, ನಂತರ ತಂದೆಗೆ ಅವರ ಪ್ರತ್ಯೇಕ ಆಸ್ತಿಯಾಗಿ ಬಂದಿರುವುದರಿಂದ ಅದು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ಮಹಿಳೆ ಸಲ್ಲಿಸಿದ್ದ ಪಾಲು ಕೋರಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆಸ್ತಿಯ ಸ್ವರೂಪವನ್ನು ನಿರ್ಧರಿಸುವಲ್ಲಿ ಅದರ ಮೂಲ ಮತ್ತು ಕಾನೂನು ಹಿನ್ನೆಲೆಯೇ ಮುಖ್ಯ ಎಂಬುದನ್ನು ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img