ವಿಜಯಸಾಕ್ಷಿ ಸುದ್ದಿ, ಗದಗ: ಕಳಂಕರಹಿತ ರಾಜಕಾರಣಿ, ಸರಳ ವ್ಯಕ್ತಿತ್ವ ಹಾಗೂ ದೂರದೃಷ್ಟಿಯ ಚಿಂತನೆ ಹೊಂದಿರುವ ಹಿರಿಯ ನಾಯಕ ಎಚ್. ಕೆ ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ನ್ಯಾಯವಾದಿ ಮೋಹನ ಭಜಂತ್ರಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಗದಗ ಜಿಲ್ಲೆಯನ್ನು ಮಾದರಿ ಅಭಿವೃದ್ಧಿಯತ್ತ ಕೊಂಡೊಯ್ದ ನಾಯಕ ಎಚ್.ಕೆ. ಪಾಟೀಲರು. ಇಂತಹ ನಾಯಕತ್ವ ಜಿಲ್ಲೆಗೂ ಹಾಗೂ ರಾಜ್ಯಕ್ಕೂ ಅಗತ್ಯವಾಗಿದೆ ಎಂದು ಹೇಳಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಎಚ್.ಕೆ. ಪಾಟೀಲರ ವಿಚಾರಧಾರೆ ಹಾಗೂ ಅನುಭವ ಸಹಕಾರಿಯಾಗಿದೆ ಎಂದು ತಿಳಿಸಿದರು.
ವಕೀಲ ಎಸ್.ಕೆ. ಪಾಟೀಲ ಮಾತನಾಡಿ, “ಎಚ್.ಕೆ. ಪಾಟೀಲರ ಸರಳತೆ, ಅನುಭವ ಹಾಗೂ ಮುಂದಾಲೋಚನೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕು. ನಾಲ್ಕು ದಶಕಗಳ ಸಾರ್ವಜನಿಕ ಸೇವೆಗೆ ಗೌರವ ಸಲ್ಲಿಸುವ ಸಮಯ ಇದು,” ಎಂದರು.
ವಕೀಲ ಹುಬ್ಬಳ್ಳಿ ಮಾತನಾಡಿ, 2004-06ರ ಅವಧಿಯಲ್ಲಿ ಕಾನೂನು ಸಚಿವರಾಗಿದ್ದಾಗ ಎಚ್.ಕೆ. ಪಾಟೀಲರು ಹಲವು ಮಹತ್ವದ ಕಾರ್ಯಗಳನ್ನು ಜಾರಿಗೊಳಿಸಿದ್ದರು. ಜಿಲ್ಲಾ ನ್ಯಾಯಾಲಯ ಸ್ಥಾಪನೆಗೂ ಅವರ ಶ್ರಮ ಕಾರಣವಾಗಿದೆ ಎಂದು ಹೇಳಿದರು.
ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗದೆ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುವ ನಾಯಕತ್ವ ಅವರದ್ದಾಗಿದೆ. ಲಾ ಚೇಂಬರ್‌ಗಳ ಪರಿಕಲ್ಪನೆ ಸೇರಿದಂತೆ ಕಾನೂನು ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಮತ್ತೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಕೀಲ ಸಮೂಹದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ ಕಲ್ಲೂರ ಹಾಗೂ ಎಸ್.ಕೆ. ನದಾಫ್, ಕೆ.ಆರ್. ಚೆನ್ನಪ್ಪಗೌಡ, ಅನಿಲ ಸಿಂಗಟಾಲಕೇರಿ, ಟಿ.ಆರ್. ಕೋಮತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಗದಗ ಜಿಲ್ಲೆಯ ಅಭಿವೃದ್ಧಿಗೆ ಎಚ್.ಕೆ. ಪಾಟೀಲರ ಕೊಡುಗೆ ಅಪಾರ. ಇಂತಹ ಅನುಭವಿ ನಾಯಕತ್ವಕ್ಕೆ ಸಚಿವ ಸ್ಥಾನ ಅಗತ್ಯ.”
ಮೋಹನ ಭಜಂತ್ರಿ



