ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಪ್ರಾಮಾಣಿಕ ಹಾಗೂ ಅನುಭವಿ ನಾಯಕರಾಗಿರುವ ಎಚ್.ಕೆ.ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಮೆಕ್ಯಾನಿಕಲ್ ಸಂಘದ ಅಧ್ಯಕ್ಷ ಉಸ್ಮಾನ್ ಮಾಳೆಕೊಪ್ಪ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೆಕ್ಯಾನಿಕಲ್ ಹುದ್ದೆ ಎನ್ನುವ ಕೀಳರಿಮೆಯಲ್ಲಿದ್ದ ನಮ್ಮನ್ನು ಒಂದೇ ವೇದಿಕೆಗೆ ತಂದು ಸಂಘಟಿಸುವಲ್ಲಿ ಶಾಸಕ ಎಚ್.ಕೆ. ಪಾಟೀಲರ ಪಾತ್ರ ಮಹತ್ವದ್ದಾಗಿದೆ” ಎಂದು ಹೇಳಿದರು.
ಸಂಘದ ಶಕ್ತಿ ಮತ್ತು ಸಾಮರ್ಥ್ಯದ ಅರಿವು ಮೂಡಿಸಿದ ಎಚ್.ಕೆ. ಪಾಟೀಲರು, ಸಂಘದ ಅಭಿವೃದ್ಧಿಗಾಗಿ 1.26 ಎಕರೆ ಜಾಗ ನೀಡಿ ಶೆಡ್ ನಿರ್ಮಾಣಕ್ಕೂ ಸಹಕಾರ ನೀಡಿದ್ದಾರೆ. ರಕ್ತದಾನ, ಅಂಗಾಂಗ ದಾನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಮಗೆ ಪ್ರೇರಣೆ ನೀಡಿದ್ದಾರೆ ಎಂದು ತಿಳಿಸಿದರು.
“ಯಾವುದೇ ಕಪ್ಪು ಚುಕ್ಕೆ ಇಲ್ಲದ, ಜನಪರ ಕೆಲಸ ಮಾಡಿದ ಇಂತಹ ನಾಯಕರಿಗೆ ಸಚಿವ ಸ್ಥಾನ ನೀಡಬೇಕು” ಎಂದು ಒತ್ತಾಯಿಸಿದರು.
ಬಿ.ಎಂ. ನದ್ದಿಮುಲ್ಲಾ ಮಾತನಾಡಿ, “ಉತ್ತರ ಕರ್ನಾಟಕದಲ್ಲಿ ಪ್ರಾಮಾಣಿಕ ನಾಯಕತ್ವ ನೀಡುತ್ತಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡದಿರುವುದು ನೋವಿನ ಸಂಗತಿ. ಅವರ ಕುಟುಂಬ ಪೀಳಿಗೆಯಿಂದ ಜನಸೇವೆಯಲ್ಲಿ ತೊಡಗಿಕೊಂಡಿದ್ದು, ಇಂತಹ ಅನುಭವಿ ನಾಯಕರಿಗೆ ಸೂಕ್ತ ಸ್ಥಾನಮಾನ ಸಿಗಬೇಕು,” ಎಂದರು.
ಈ ವೇಳೆ ಮಹಮದ್ ಶಬ್ಬೀರ, ನಿಂಗಪ್ಪ ಎಂಬತ್ತನಾಳ, ಸೈಯದ್ ಜಮೀರ್ ಖಾಜಿ, ಮಹಮದ್ ಅಲಿ ನವಲಗುಂದ, ಅಬ್ದುಲ್ ಖಾದರ್, ಸಿರಾಜ್ ಬಾಗಲಕೋಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಮೆಕ್ಯಾನಿಕಲ್ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಿದ ನಾಯಕ ಎಚ್.ಕೆ. ಪಾಟೀಲರು. ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯ.”
ಉಸ್ಮಾನ್ ಮಾಳೆಕೊಪ್ಪ



