ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂ. ಪಡೆಯುತ್ತಿರುವ ಫಲಾನುಭವಿಗಳಿಗೆ ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ಹೆಚ್ಚುವರಿ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ. ಚುನಾವಣೆಗೂ ಮುನ್ನ ಯಾವುದೇ ಷರತ್ತುಗಳಿಲ್ಲದೆ ಘೋಷಿಸಿದ್ದ ಯೋಜನೆಗೆ ಈಗ ಹೊಸ ನಿಯಮಗಳನ್ನು ಸೇರಿಸಿ ಲಕ್ಷಾಂತರ ಮಹಿಳೆಯರನ್ನು ಹೊರಗಿಡಲಾಗುತ್ತಿದೆ ಎಂದು ಆರೋಪಿಸಿದೆ.
ರಾಜ್ಯದಲ್ಲಿ ಸದ್ಯ 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಸುಮಾರು 1.48 ಲಕ್ಷ ಮಂದಿ ಮೃತಪಟ್ಟಿದ್ದರೂ ಕಳೆದ ಐದು ತಿಂಗಳುಗಳಿಂದ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವ ಮಾಹಿತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ನಿಯಮ ಪರಿಷ್ಕರಣೆಗೆ ಮುಂದಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್, 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟಿರುವುದು ಸರ್ಕಾರದ ನಿಜವಾದ ಮುಖವನ್ನು ಬಯಲಿಗೆಳೆದಿದೆ ಎಂದು ಟೀಕಿಸಿದೆ. ಬಯೋಮೆಟ್ರಿಕ್ ಹಾಗೂ ಸರ್ವರ್ ಸಮಸ್ಯೆಗಳನ್ನು ನೆಪವನ್ನಾಗಿ ಮಾಡಿಕೊಂಡು ಬಡ ಮಹಿಳೆಯರ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದೆ.
ಇನ್ನೂ ಗೃಹಲಕ್ಷ್ಮಿ ಫಲಾನುಭವಿಗಳ ಕಡಿತ ಕುರಿತು ಮುಖ್ಯಮಂತ್ರಿಯವರೇ ಸ್ಪಷ್ಟ ಮಾಹಿತಿ ನೀಡದಿರುವುದನ್ನು ಪ್ರಶ್ನಿಸಿರುವ ಜೆಡಿಎಸ್, “ಸಿಎಂಗೆ ಗೊತ್ತಿಲ್ಲ ಎಂದಾದರೆ ಆಡಳಿತ ನಡೆಸುತ್ತಿರುವುದು ಯಾರು?” ಎಂದು ಪ್ರಶ್ನಿಸಿದೆ.
ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮತ ಪಡೆದು ಬಳಿಕ ಫಲಾನುಭವಿಗಳನ್ನು ಅನರ್ಹರೆಂದು ಘೋಷಿಸುವುದು ವಂಚನೆ ಎಂದು ಆರೋಪಿಸಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.



