ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ನೀಡುವುದರ ಜೊತೆಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನೂ ನೀಡಬೇಕು ಎಂದು ಎಸ್‌ಎಸ್‌ಕೆ ಸಮಾಜದ ಕಾಂಗ್ರೆಸ್ ಬೆಂಬಲಿಗರು ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಸ್‌ಕೆ ಸಮಾಜದ ಮುಖಂಡ ವಿನೋದ ಆರ್. ಶಿದ್ಲಿಂಗ, ಎಚ್.ಕೆ. ಪಾಟೀಲರು ದೂರದೃಷ್ಟಿಯುಳ್ಳ, ನಿಷ್ಕಳಂಕ ಹಾಗೂ ಜನಪರ ರಾಜಕಾರಣಿಯಾಗಿದ್ದಾರೆ. ನಾಡು-ನುಡಿ, ನೆಲ-ಜಲ ಮತ್ತು ರೈತರ ಹಿತಾಸಕ್ತಿಗಾಗಿ ನಿರಂತರ ಹೋರಾಟ ನಡೆಸಿರುವ ಅಪರೂಪದ ನಾಯಕ ಎಂದು ಬಣ್ಣಿಸಿದರು.
ಗದಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ಹೊಸ ಆಯಾಮ ನೀಡಿರುವ ಪಾಟೀಲರು, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಂತಹ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ತಮಗೆ ವಹಿಸಲಾದ ಪ್ರತಿಯೊಂದು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಸರ್ಕಾರಕ್ಕೆ ಉತ್ತಮ ಹೆಸರು ತಂದಿದ್ದಾರೆ ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ಆರ್.ಕೆ. ಹಬೀಬ (ಬುಡ್ಡಣ್ಣ) ಮಾತನಾಡಿ, ಮೊದಲ ಹಂತದ ಸಚಿವ ಸಂಪುಟ ಪಟ್ಟಿಯಲ್ಲಿ ಎಚ್.ಕೆ. ಪಾಟೀಲರ ಹೆಸರು ಘೋಷಣೆಯಾಗದಿರುವುದು ಅಚ್ಚರಿ ಹಾಗೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಅಭಿವೃದ್ಧಿಯ ಹೊಸ ಮಾದರಿ ನಿರ್ಮಿಸಿರುವ ಪಾಟೀಲರಿಗೆ ಸರ್ಕಾರ ಉನ್ನತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಮೋಹನ ಪವಾರ ಮಾತನಾಡಿ, ಎಚ್.ಕೆ. ಪಾಟೀಲರ ಸುದೀರ್ಘ ರಾಜಕೀಯ ಅನುಭವ, ಪ್ರಾಮಾಣಿಕತೆ ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಸರ್ಕಾರಕ್ಕೆ ಹೆಚ್ಚಿನ ಬಲ ನೀಡಲಿದೆ. ಇಂತಹ ಹಿರಿಯ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡಿದರೆ ಸರ್ಕಾರದ ವರ್ಚಸ್ಸು ಮತ್ತಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಎಸ್‌ಎಸ್‌ಕೆ ಸಮಾಜದ ಕಾಂಗ್ರೆಸ್ ಬೆಂಬಲಿಗರ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ರಾಜು ಬದಿ, ರಾಮಣ್ಣ ಬಾಕಳೆ, ಸುರೇಶಕುಮಾರ ಬದಿ, ವಿಷ್ಣುಸಾ ಶಿದ್ಲಿಂಗ, ಪ್ರಕಾಶ ಖೋಡೆ, ಅಂಬಾಸಾ ಖೋಡೆ, ಅಂಬಾಸಾ ಶಿದ್ಲಿಂಗ, ಜಗದೀಶ ಪವಾರ, ವಿಷ್ಣು ಹಬೀಬ ಹಾಗೂ ಶ್ರೀಮತಿ ಗೀತಾ ಹಬೀಬ ಉಪಸ್ಥಿತರಿದ್ದರು.
“ನಾಡು-ನುಡಿ, ನೆಲ-ಜಲ ಹಾಗೂ ರೈತರ ಹಿತಾಸಕ್ತಿಗಾಗಿ ನಿರಂತರ ಹೋರಾಟ ನಡೆಸಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ಮಾತ್ರವಲ್ಲ, ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಿ ಗೌರವಿಸಬೇಕು.”
ವಿನೋದ ಆರ್. ಶಿದ್ಲಿಂಗ, ಎಸ್‌ಎಸ್‌ಕೆ ಸಮಾಜದ ಮುಖಂಡ



