ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿ ಗದಗ ಎಪಿಎಂಸಿ ಹಮಾಲರು, ಚಕ್ಕಡಿ ಸಂಘ ಹಾಗೂ ತಳಗಾಳು ಸಂಘದ ಸದಸ್ಯರು ಗುರುವಾರ ನಗರದಲ್ಲಿ ವಿಶಿಷ್ಟ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಆವರಣದಿಂದ ವೀರೇಶ್ವರ ಪುಣ್ಯಾಶ್ರಮದವರೆಗೆ ಶ್ರಮಿಕರು ದೀಡ್ ನಮಸ್ಕಾರ ಹಾಕುತ್ತಾ ಸಾಗುವ ಮೂಲಕ ತಮ್ಮ ಒತ್ತಾಯವನ್ನು ಸರ್ಕಾರದ ಗಮನಕ್ಕೆ ತಂದರು. ಜೊತೆಗೆ ಹಲಗೆ ಬಾರಿಸಿ ಘೋಷಣೆಗಳನ್ನು ಕೂಗುತ್ತ ಶಕ್ತಿ ಪ್ರದರ್ಶನ ನಡೆಸಿದರು.
ಮೆರವಣಿಗೆಗೆ ಮುನ್ನ ಎಪಿಎಂಸಿ ಹಮಾಲರ ವಿಶ್ರಾಂತಿ ಗೃಹದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಾಲನೆ ನೀಡಲಾಯಿತು.
ಪ್ರತಿಭಟನಾಕಾರರು, “ಬಡವರು, ಹಿಂದುಳಿದವರು, ಹಮಾಲರು ಹಾಗೂ ಶ್ರಮಿಕರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು” ಎಂಬ ಬರಹವಿರುವ ಫಲಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಕರ್ನಾಟಕ ರಾಜ್ಯ ಹಮಾಲರ ಒಕ್ಕೂಟದ ರಾಜ್ಯಾಧ್ಯಕ್ಷ ಅಯ್ಯಪ್ಪ ನಾಯ್ಕರ್, ಎಪಿಎಂಸಿ ಹಮಾಲರು ಹಾಗೂ ಚಕ್ಕಡಿ ಸಂಘದ ಅಧ್ಯಕ್ಷ ಆದಪ್ಪ ಮಾರೆಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಜಿಲ್ಲೆಯ ಅಭಿವೃದ್ಧಿಗೆ ಎಚ್.ಕೆ. ಪಾಟೀಲ ಅವರ ಕೊಡುಗೆ ಮಹತ್ವದ್ದಾಗಿದೆ. ಮೊದಲ ಹಂತದಲ್ಲಿ ಅವಕಾಶ ತಪ್ಪಿದ್ದರೆ, ಎರಡನೇ ಹಂತದಲ್ಲಾದರೂ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಕಮಲವ್ವ ಚಲವಾದಿ, ಕನಕವ್ವ ದಾಸರ, ಯಲ್ಲವ್ವ ಚಲವಾದಿ, ರಾಮಚಂದ್ರ ಹರಿಜನ, ಹನಮವ್ವ ತುಮ್ಮರಮಟ್ಟಿ, ಸುಮಾ ಆದೋನಿ, ಶೇಖವ್ವ ಸಂಕಣ್ಣವರ, ಸರೋಜವ್ವ ಚಲವಾದಿ ಸೇರಿದಂತೆ ಹಲವರು ದೀಡ್ ನಮಸ್ಕಾರ ಹಾಕಿ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ 200ಕ್ಕೂ ಹೆಚ್ಚು ಹಮಾಲರು, ಶ್ರಮಿಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.



