ವಿಜಯಸಾಕ್ಷಿ ಸುದ್ದಿ, ಗದಗ: ಮಣ್ಣಿನ ಆರೋಗ್ಯ ಸಂರಕ್ಷಣೆ, ಕೃಷಿ ವೆಚ್ಚ ಕಡಿತ ಹಾಗೂ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಸಂಯುಕ್ತ ಆಶ್ರಯದಲ್ಲಿ ಖೇತ್ ಬಚಾವೋ ಅಭಿಯಾನದಡಿ ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ಬೀಜೋಪಚಾರ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗದಗ ತಾಲೂಕಿನ ಬೂದಿಶ್ವರ ಹೊಸಳ್ಳಿ ಹಾಗೂ ಶ್ಯಾಗೋಟಿ ಗ್ರಾಮಗಳಲ್ಲಿ ಜೂನ್ 8ರಂದು ನಡೆದ ಈ ಕಾರ್ಯಕ್ರಮದಲ್ಲಿ ರೈತರಿಗೆ ಮಣ್ಣಿನ ಫಲವತ್ತತೆ ಕಾಪಾಡುವ ವಿಧಾನಗಳು, ಸಮತೋಲಿತ ಗೊಬ್ಬರ ಬಳಕೆ, ಜೈವಿಕ ಕೃಷಿ ಪದ್ಧತಿಗಳು, ನೀರಿನ ಸಂರಕ್ಷಣೆ ಹಾಗೂ ಸಮಗ್ರ ಕೀಟ ನಿರ್ವಹಣೆ ಕುರಿತು ತಜ್ಞರು ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಣ್ಣು ಪರೀಕ್ಷೆಯ ಮಹತ್ವವನ್ನು ವಿವರಿಸಿ, ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು. ಇದರಿಂದ ಬೆಳೆ ರೋಗಗಳನ್ನು ತಡೆಗಟ್ಟುವ ಜೊತೆಗೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರದ ವಿವಿಧ ಯೋಜನೆಗಳು, ಸಬ್ಸಿಡಿ ಸೌಲಭ್ಯಗಳು ಹಾಗೂ ಕೃಷಿ ಯಂತ್ರೋಪಕರಣಗಳ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಖೇತ್ ಬಚಾವೋ ಅಭಿಯಾನವು ಸಾವಯವ ಕೃಷಿಗೆ ಉತ್ತೇಜನ ನೀಡುವ ಜೊತೆಗೆ ಕೃಷಿ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಪ್ರಗತಿಪರ ರೈತರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಎನ್.ಎಚ್. ಭಂಡಿ, ಪ್ರವೀಣ ಕರಿಕಟ್ಟಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಅಧಿಕಾರಿಗಳಾದ ರಾಜರಾಜೇಶ್ವರಿ ಚಿನಿವಾರ, ಬಸವರಾಜೇಶ್ವರಿ ಸಜ್ಜನರ, ಪ್ರಗತಿಪರ ರೈತ ವಿಜಯಕುಮಾರ ಸುಂಕದ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬೂದಿಶ್ವರ ಹೊಸಳ್ಳಿ, ಕುರ್ತಕೋಟಿ, ಶ್ಯಾಗೋಟಿ, ದುಂದೂರ ಹಾಗೂ ಚಿಕ್ಕಹಂದಿಗೋಳ ಗ್ರಾಮಗಳ ರೈತರು, ರೈತ ಮಹಿಳೆಯರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



