ಶಿವಮೊಗ್ಗ: ಮಳೆಗಾಲದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತವು ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ-169ಎ ಆಗುಂಬೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರವನ್ನು ಜೂನ್ 15ರಿಂದ ಮಳೆಗಾಲ ಮುಗಿಯುವವರೆಗೆ ನಿಷೇಧಿಸಲಾಗಿದೆ.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೊರಡಿಸಿರುವ ಆದೇಶದ ಪ್ರಕಾರ, ಆಗುಂಬೆ ಘಾಟ್ ಪ್ರದೇಶದಲ್ಲಿ ಭೂಕುಸಿತ ಮತ್ತು ರಸ್ತೆ ಹಾನಿಯ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹುಲಿಕಲ್ ಘಾಟ್‌ನಲ್ಲಿ ನಡೆದ ಭೂಕುಸಿತದ ನಂತರ ಆ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ, ಹೆಚ್ಚಿನ ವಾಹನಗಳು ಆಗುಂಬೆ ಘಾಟ್ ಮಾರ್ಗಕ್ಕೆ ತಿರುಗಿರುವುದು ಪರಿಸ್ಥಿತಿಯನ್ನು ಗಂಭೀರಗೊಳಿಸಿದೆ.
ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಭೂಕುಸಿತ, ರಸ್ತೆ ಅಪಘಾತ ಹಾಗೂ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಭಾರಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪರ್ಯಾಯ ಮಾರ್ಗಗಳಾಗಿ ತೀರ್ಥಹಳ್ಳಿ–ನಗರ–ನಾಗೋಡಿ–ಕೊಲ್ಲೂರು–ಕುಂದಾಪುರ–ಉಡುಪಿ ಹಾಗೂ ತೀರ್ಥಹಳ್ಳಿ–ಶೃಂಗೇರಿ–ಕೆರೆಕಟ್ಟೆ–ಬಜಗೋಳಿ–ಕಾರ್ಕಳ–ಉಡುಪಿ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ. ಉಡುಪಿ ಹಾಗೂ ಇತರ ಕರಾವಳಿ ಭಾಗದಿಂದ ತೀರ್ಥಹಳ್ಳಿಗೆ ಸಂಚರಿಸುವ ವಾಹನಗಳಿಗೂ ಇದೇ ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಆದೇಶಿಸಲಾಗಿದೆ.
ಈ ಕ್ರಮದಿಂದ ನಾಲ್ಕು ಜಿಲ್ಲೆಗಳ ಜನರಿಗೆ ತಾತ್ಕಾಲಿಕ ತೊಂದರೆ ಉಂಟಾಗಬಹುದಾದರೂ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.



