ಕಾರವಾರ: ಕಾಲೇಜು ಶುಲ್ಕಕ್ಕಾಗಿ ತಂದೆ ನೀಡಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿಯೊಬ್ಬಳು, ಹಣ ಮರಳಿ ಸಿಗದೆ ಪರೀಕ್ಷೆಯಿಂದ ವಂಚಿತಳಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ.
ಗಾಯತ್ರಿ ಎಂಬ ವಿದ್ಯಾರ್ಥಿನಿ ಭಟ್ಕಳದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಶುಲ್ಕ ಪಾವತಿಸಲು ತಂದೆ 10 ಸಾವಿರ ರೂಪಾಯಿ ನೀಡಿದ್ದರು. ಇದೇ ವೇಳೆ ಸಂತೋಷ ಮಾಧೇದ ನಾಯ್ಕ ಎಂಬ ಪರಿಚಯಸ್ಥ ವ್ಯಕ್ತಿ ಹಣದ ಅವಶ್ಯಕತೆ ಇದೆ ಎಂದು ಹೇಳಿ ಆಕೆಯಿಂದ ಹಣ ಪಡೆದುಕೊಂಡಿದ್ದಾನೆ.
ಆದರೆ ಹಲವು ಬಾರಿ ಕೇಳಿದರೂ ಹಣವನ್ನು ಮರಳಿ ನೀಡದ ಕಾರಣ ಗಾಯತ್ರಿಗೆ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಪರಿಣಾಮ ಪರೀಕ್ಷೆಯ ಹಾಲ್ಟಿಕೆಟ್ ಸಿಗದೆ ಆಕೆ ತೀವ್ರ ನಿರಾಸೆಗೆ ಒಳಗಾಗಿದ್ದಾಳೆ.
ಶುಲ್ಕ ಕಟ್ಟಲು ಸಾಧ್ಯವಾಗದ ನೋವಿನಿಂದ ಮನನೊಂದ ಗಾಯತ್ರಿ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವಾದ ಎಲ್ಲ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



