ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರವಾಗಿದ್ದು, ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉನ್ನತ ಗುರಿ ಸಾಧನೆಗೆ ಪ್ರೋತ್ಸಾಹಿಸಬೇಕು ಎಂದು ಶಿವಾನಂದ ಬ್ರಹ್ಮನ್ಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ವಿವೇಕಾನಂದ ನಗರದ ಗಾಣಿಗ ಸಮುದಾಯ ಭವನದಲ್ಲಿ ಶನಿವಾರ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ, ವಾರ್ಷಿಕ ಸಭೆ ಹಾಗೂ ವಧು-ವರರ ಸಮಾವೇಶ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಣವು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿಲ್ಲ. ಅದು ಆರ್ಥಿಕ ಸ್ವಾವಲಂಬನೆ, ಉತ್ತಮ ಆರೋಗ್ಯ, ಸಂಸ್ಕಾರ ಮತ್ತು ಸಮಾಜದ ಪ್ರಗತಿಗೆ ದಾರಿಯಾಗುತ್ತದೆ. ಸಮಾಜದ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಸಮುದಾಯ ಭವನದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿಗಳನ್ನು ಆರಂಭಿಸಬೇಕು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸವನ್ನು ಸಮಾಜದ ಮುಖಂಡರು ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಬೆನಕೊಪ್ಪ
ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಜನತೆ ದಾರಿ ತಪ್ಪದಂತೆ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಕಲಿಸಬೇಕು ಎಂದು ಹೇಳಿದರು.
“ಅಂಕಗಳು ಮಾತ್ರ ಪ್ರತಿಭೆಯ ಮಾನದಂಡವಲ್ಲ. ಪ್ರತಿಯೊಬ್ಬ ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ” ಎಂದು ಅಭಿಪ್ರಾಯಪಟ್ಟರು.
ಶಿಕ್ಷಣವೇ ಯಶಸ್ಸಿನ ಮೆಟ್ಟಿಲು: ಬಸವರಾಜ ಕೆಂಪವಾಡ
ಭಾರತೀಯ ಅರಣ್ಯ ಸೇವೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಬಸವರಾಜ ಕೆಂಪವಾಡ ಮಾತನಾಡಿ, ಉತ್ತಮ ಶಿಕ್ಷಣ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೇ, ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಸ್ತು, ಪರಿಶ್ರಮ ಹಾಗೂ ಸ್ಪಷ್ಟ ಗುರಿ ಅಗತ್ಯ. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಮನೋಭಾವ ಪ್ರತಿಯೊಬ್ಬ ಯುವಕರಲ್ಲೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹತ್ತು ವರ್ಷಗಳಿಂದ ಪ್ರತಿಭೆಗೆ ಪ್ರೋತ್ಸಾಹ
ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಬಸವರಾಜ ಬಿಂಗಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಮಾತ್ರ ಉನ್ನತ ಸಾಧನೆ ಸಾಧ್ಯ. ಗಾಣಿಗ ಸಮಾಜದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವಂತಾಗಬೇಕು ಎಂದು ಆಶಿಸಿದರು.
135 ಪ್ರತಿಭಾವಂತರಿಗೆ ಗೌರವ
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 135 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಅರಣ್ಯ ಸೇವೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದ ಬಸವರಾಜ ಕೆಂಪವಾಡ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಷಣ್ಮಖಪ್ಪ ಬಡ್ನಿ, ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಜಿಲ್ಲಾ ಗಾಣಿಗ ಸಮಾಜದ ಉಪಾಧ್ಯಕ್ಷ ಬಿ.ಬಿ. ಐನಾಪೂರ, ಸಮಾಜದ ಮುಖಂಡರಾದ ಅಶೋಕ ಮಂದಾಲಿ, ಸಿದ್ದು ಪಾಟೀಲ ಸೇರಿದಂತೆ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗವರ್ಧಕ ಟ್ರಸ್ಟ್ನ ಪದಾಧಿಕಾರಿಗಳಾದ ಮುರುಘರಾಜೇಂದ್ರ ಬಡ್ನಿ, ಸುರೇಶ ಮರಳಪ್ಪನವರ, ಎಸ್.ವಿ. ಪವಾಡಿಗೌಡ್ರ, ಗಿರಿಯಪ್ಪ ಅಸೂಟಿ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಬಿ.ಎಸ್. ವಡವಟ್ಟಿ, ದಶರಥ ಗಾಣಿಗೇರ, ಬಸವರಾಜ ಸುಂಕದ, ಫಕೀರಪ್ಪ ಸಿಂಧಗಿ, ಹಾಲಪ್ಪ ಬಣವಿ, ಅಮರೇಶ ಹಾದಿ, ಶ್ರೀಕಾಂತ ಲಕ್ಕುಂಡಿ, ತೋಟಪ್ಪ ಗಾಣಿಗೇರ, ಐ.ಎಂ. ಕಿರೇಸೂರ, ಬಸವಂತಪ್ಪ ನವಲಳ್ಳಿ, ಸಂದೀಪ ಬೆಳವಟಗಿ, ಬಸವರಾಜ ನಲವಗುಂದ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
“ಸಮಾಜದ ಪ್ರಗತಿಗೆ ಶಿಕ್ಷಣವೇ ಅಡಿಪಾಯ. ಬಡ ಹಾಗೂ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಸಮಾಜವೇ ಬೆನ್ನೆಲುಬಾಗಿ ನಿಲ್ಲಬೇಕು; ಆಗ ಮಾತ್ರ ಉಜ್ವಲ ಭವಿಷ್ಯದ ಸಮಾಜ ನಿರ್ಮಾಣ ಸಾಧ್ಯ.”
ಸದಾಶಿವಾನಂದ ಸ್ವಾಮೀಜಿ
ಶಿವಾನಂದ ಬ್ರಹ್ಮನ್ಮಠ



