ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಕೀರ್ಣದಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕತೆ ನಿರ್ಮೂಲನೆ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕತೆ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿ, ಮಕ್ಕಳ ಹಕ್ಕುಗಳು, ಶಿಕ್ಷಣದ ಮಹತ್ವ ಹಾಗೂ ಸುರಕ್ಷಿತ ಬಾಲ್ಯದ ಅಗತ್ಯತೆಯ ಕುರಿತು ಮಾಹಿತಿ ನೀಡಲಾಯಿತು.
ಕೆ.ಜಿ.ಎಸ್. ಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ. ಗವಿ ಮಾತನಾಡಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಬಾಲ್ಯದ ಹಕ್ಕು ಇದೆ. ಯಾವುದೇ ಮಗುವನ್ನು ದುಡಿಮೆಗೆ ತೊಡಗಿಸುವುದು ಕಾನೂನುಬಾಹಿರವಾಗಿದ್ದು, ಬಾಲ ಕಾರ್ಮಿಕತೆ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಬಾಲ ಕಾರ್ಮಿಕತೆ, ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡುಬಂದಲ್ಲಿ ಸಮೀಪದ ಅಂಗನವಾಡಿ ಕೇಂದ್ರ, ಶಾಲೆ ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡುವ ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ಬಿಂಗಿ ಮಾತನಾಡಿ, ಬಾಲ ಕಾರ್ಮಿಕತೆ ಸಮಾಜದ ಅಭಿವೃದ್ಧಿಗೆ ಮಾರಕವಾಗಿದ್ದು, ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಅಂದಪ್ಪ ಮಾದರ, ವೀರಪ್ಪ ಮುಕ್ಕಣ್ಣವರ, ಶಿಕ್ಷಕರಾದ ಎಂ.ವಿ. ತಾಳಿಕೋಟಿ, ಎ.ಪಿ. ಶೆಟ್ಟರ, ಸಿ.ಎಸ್. ಬೆಳ್ಳಟ್ಟಿ, ಎಸ್.ಎ. ಪಲ್ಲೇದ, ಪಿ.ಜಿ. ಹುಯಿಲಗೋಳ, ಎಸ್.ಎಸ್. ಯಲ್ಲರಡ್ಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಬಾಲ ಕಾರ್ಮಿಕತೆ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
“ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಬಾಲ ಕಾರ್ಮಿಕತೆ ನಿರ್ಮೂಲನೆಗೆ ಸಮಾಜದ ಎಲ್ಲ ವರ್ಗದವರ ಸಹಕಾರ ಅಗತ್ಯ.”
ಎಸ್.ಬಿ. ಗವಿ, ಮುಖ್ಯ ಶಿಕ್ಷಕರು



