ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಧಿಕ ಮಾಸದ ಅಂಗವಾಗಿ ಪಟ್ಟಣದ ಶಂಕರ ಭಾರತಿ ಮಠದಲ್ಲಿ ವಿಪ್ರ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾದ ವಿಶೇಷ ಧಾರ್ಮಿಕ ಹಾಗೂ ಭಜನಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಅಧಿಕ ಮಾಸದ ಅವಧಿಯಲ್ಲಿ ವಿಷ್ಣು ಸಹಸ್ರನಾಮ ಪಠಣ, ಗೌರಿ ಪೂಜೆ, ಶಾರದಾ ಭಜನಾ ಮಂಡಳಿಯಿಂದ ನಿತ್ಯ ವಿಶೇಷ ಭಜನೆ ಹಾಗೂ ಕೋಲಾಟ ಕಾರ್ಯಕ್ರಮಗಳು ನಡೆದವು. ಮಾಸದ ಕೊನೆಯ ದಿನವಾದ ಭಾನುವಾರ ನಡೆದ ಮಂಗಲೋತ್ಸವದಲ್ಲಿ ವಿಪ್ರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿಗೀತೆಗಳು, ದಾಸರ ಪದಗಳು ಹಾಗೂ ದೇವರ ನಾಮಸ್ಮರಣೆಯ ಮೂಲಕ ಭಜನೆ ನಡೆಸಿದರು.
ಈ ವೇಳೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸಮಸ್ತ ಜನರ ಸುಖ-ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಪ್ರ ಸಮಾಜದ ಅಧ್ಯಕ್ಷ ಗೋಪಾಲ ಫಡ್ನಿಸ್ ಹಾಗೂ ಸೋಮೇಶ್ವರ ಭಕ್ತರ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಹಿಂದೂ ಧರ್ಮದಲ್ಲಿ ಅಧಿಕ ಮಾಸಕ್ಕೆ ವಿಶೇಷ ಮಹತ್ವವಿದ್ದು, ಈ ಮಾಸದ ಅಧಿಪತಿ ಶ್ರೀಮನ್ನಾರಾಯಣನಾಗಿದ್ದಾನೆ. ಈ ಅವಧಿಯಲ್ಲಿ ವಿಷ್ಣು ಸಹಸ್ರನಾಮ ಪಠಣ, ಜಪ-ತಪ, ಪೂಜೆ ಹಾಗೂ ದಾನಧರ್ಮಗಳನ್ನು ಆಚರಿಸುವುದರಿಂದ ಆತ್ಮಿಕ ಶಾಂತಿ ಮತ್ತು ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೀಮಂತಿನಿ ಕುಲಕರ್ಣಿ, ಶುಭಾ ಕುಲಕರ್ಣಿ, ಮೇಘಾ ಸಾಹುಕಾರ, ಸಾವಿತ್ರಿ ದೇಶಪಾಂಡೆ, ಲೀಲಾ ಕುಲಕರ್ಣಿ, ಮೀನಾಕ್ಷಿ ಸರದೇಶಪಾಂಡೆ, ಜಯಶ್ರೀ ಪಾಟೀಲ ಕುಲಕರ್ಣಿ, ರಾಧಿಕಾ ಕುಲಕರ್ಣಿ, ರಮಾ ರಾಯಚೂರ, ಜಯಮ್ಮ ಪಾಟೀಲ, ವೀಣಾ ಫಡ್ನಿಸ್, ಚೇತನಾ ಪೂಜಾರ ಸೇರಿದಂತೆ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
“ಅಧಿಕ ಮಾಸವು ಆತ್ಮಶುದ್ಧಿ, ಭಕ್ತಿ ಮತ್ತು ದಾನಧರ್ಮಗಳಿಗೆ ಮೀಸಲಾದ ಪವಿತ್ರ ಕಾಲ. ಈ ಅವಧಿಯಲ್ಲಿ ದೇವರ ನಾಮಸ್ಮರಣೆ ಮಾಡಿದರೆ ಜೀವನದಲ್ಲಿ ನೆಮ್ಮದಿ ಮತ್ತು ಸಾರ್ಥಕತೆ ದೊರೆಯುತ್ತದೆ.”
ಗುರುರಾಜ ಪಾಟೀಲ ಕುಲಕರ್ಣಿ
ಅಧ್ಯಕ್ಷರು, ಸೋಮೇಶ್ವರ ಭಕ್ತರ ಕಮಿಟಿ



