ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವದ ರಕ್ಷಣೆ ಕೇವಲ ರಾಜಕೀಯ ಪಕ್ಷಗಳ ಹೊಣೆಗಾರಿಕೆಯಲ್ಲ. ಸಮಾಜದ ಪ್ರತಿಯೊಬ್ಬ ಜಾಗೃತ ನಾಗರಿಕನ ಜವಾಬ್ದಾರಿಯೂ ಆಗಿದೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.
ನಗರದ ಎಸ್ಡಿಪಿಐ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಮಧ್ಯಂತರ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಹಾಗೂ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಒತ್ತಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಮೇಲಿನ ಅನ್ಯಾಯ ಹಾಗೂ ಅಧಿಕಾರ ದುರುಪಯೋಗದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಹಕ್ಕುಗಳ ಸಂರಕ್ಷಣೆಗಾಗಿ ಸಂಘಟಿತ ಹೋರಾಟಗಳು ಅನಿವಾರ್ಯವಾಗಿದ್ದು, ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪ್ರಜಾಪ್ರಭುತ್ವ ಬಲಪಡಿಸಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕುರಿತು ಮಾತನಾಡಿದ ಅವರು, ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಕಾರ್ಯಕರ್ತರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ಅಲಿ ಮಧ್ಯಂತರ ವರದಿ ಮಂಡಿಸಿದರು. ಬಳಿಕ ಜಿಲ್ಲೆಯ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ ಸುಮಯ್ಯ, ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿವಿಧ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
“ಪ್ರಜಾಪ್ರಭುತ್ವವನ್ನು ಬಲಪಡಿಸುವ ಶಕ್ತಿ ಮತದಾರರಲ್ಲಿದೆ. ಜನರ ಹಕ್ಕುಗಳ ರಕ್ಷಣೆಗಾಗಿ ಜಾಗೃತಿ ಮತ್ತು ಸಂಘಟಿತ ಹೋರಾಟಗಳು ಇಂದಿನ ಅಗತ್ಯವಾಗಿದೆ.”
ಅಪ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ
ಪ್ರಮುಖ ನಿರ್ಣಯಗಳು
- ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಮೂಲಭೂತ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಬೇಕು.
- ಹೊಂಬಳ ನಾಕಾ ಫ್ಲೈಓವರ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು.
- ಬೈಪಾಸ್ ಮೂಲಕ ಸಂಚರಿಸುವ ರೈಲುಗಳನ್ನು ಗದಗ ಜಂಕ್ಷನ್ ಮೂಲಕ ಓಡಿಸಲು ಕ್ರಮ ಕೈಗೊಳ್ಳಬೇಕು.
- ಗದಗ ನಗರದ ರಸ್ತೆ ಕಾಮಗಾರಿಗಳನ್ನು ಮುಂಗಾರು ಮುನ್ನ ಪೂರ್ಣಗೊಳಿಸಬೇಕು.
- ಗದಗ-ನರಗುಂದ ರಸ್ತೆಯ ಕುಸಿದ ಭಾಗದಲ್ಲಿ ಹೊಸ ಸೇತುವೆ ನಿರ್ಮಾಣವನ್ನು ತ್ವರಿತಗೊಳಿಸಬೇಕು.
- ಮಳೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ಶಾಶ್ವತ ವಸತಿ ಸೌಲಭ್ಯ ಕಲ್ಪಿಸಬೇಕು.



