HomeGadag Newsಮಳೆಯ ನಿರೀಕ್ಷೆಯಲ್ಲಿ ಗುರ್ಜಿ ಪೂಜೆ: ಅಬ್ಬಿಗೇರಿಯಲ್ಲಿ ಜೀವಂತವಾದ ಜನಪದ ಸಂಪ್ರದಾಯ

ಮಳೆಯ ನಿರೀಕ್ಷೆಯಲ್ಲಿ ಗುರ್ಜಿ ಪೂಜೆ: ಅಬ್ಬಿಗೇರಿಯಲ್ಲಿ ಜೀವಂತವಾದ ಜನಪದ ಸಂಪ್ರದಾಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: “ಗುರ್ಜಿ… ಗುರ್ಜಿ… ಎಲ್ಲಾಡಿ ಬಂದೆ… ಹಳ್ಳ-ಕೊಳ್ಳ ತಿರುಗಾಡಿ ಬಂದೆ… ಕಾರ ಮಳೆಯೇ, ಕಪ್ಪತ್ತ ಮಳೆಯೇ…” ಎಂಬ ಜನಪದ ಗೀತೆಯ ನಿನಾದದೊಂದಿಗೆ ಸಮೀಪದ ಅಬ್ಬಿಗೇರಿ ಗ್ರಾಮದ ಗೌಡ್ರ ಓಣಿಯ ರೈತ ಮಹಿಳೆಯರು ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿ ಮಳೆರಾಯನಿಗೆ ಮೊರೆ ಹೋದರು.

ಮುಂಗಾರು ಆರಂಭದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯನ್ನೇ ನಂಬಿ ರೈತರು ಶೇಂಗಾ, ತೊಗರಿ, ಹೆಸರು ಹಾಗೂ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಳಿಸಿದ್ದರು. ಆದರೆ ಕಳೆದ ಹಲವು ದಿನಗಳಿಂದ ಮಳೆ ಕಾಣಿಸದ ಕಾರಣ ಮೊಳಕೆ ಒಡೆಯುತ್ತಿರುವ ಬೀಜಗಳಿಗೆ ತೇವಾಂಶದ ಕೊರತೆ ಎದುರಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರು ಶತಮಾನಗಳಿಂದ ನಡೆದುಕೊಂಡು ಬಂದಿರುವ ಜನಪದ ಸಂಪ್ರದಾಯದಂತೆ ಗುರ್ಜಿ ಪೂಜೆ ಆಚರಿಸಿದರು. ರೊಟ್ಟಿ ಬೇಯಿಸುವ ಹಂಚಿನ ಮೇಲೆ ಆಕಳ ಸಗಣಿಯಿಂದ ತಯಾರಿಸಿದ ಗುರ್ಜಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹಸಿರು ಹುಲ್ಲಿನ ಸಸಿಗಳಿಂದ ಅಲಂಕರಿಸಿ ಗ್ರಾಮದ ಓಣಿ-ಓಣಿಗಳಲ್ಲಿ ಸಂಚರಿಸಿದರು.

ಮಹಿಳೆಯರು ಜನಪದ ಹಾಡುಗಳನ್ನು ಹಾಡುತ್ತಾ ಪ್ರತಿ ಮನೆಯ ಮುಂದೆ ತೆರಳಿದಾಗ, ಮನೆಯವರು ಗುರ್ಜಿ ಹೊತ್ತ ಮಹಿಳೆಯರ ತಲೆ ಮೇಲೆ ನೀರು ಸುರಿದು ಪೂಜೆ ಸಲ್ಲಿಸಿದರು. ಜೋಳ, ರೊಟ್ಟಿ-ಪಲ್ಲೆ, ಧಾನ್ಯ, ಪುಡಿಗಾಸು ಸೇರಿದಂತೆ ವಿವಿಧ ದವಸಧಾನ್ಯಗಳನ್ನು ಸಮರ್ಪಿಸಿದರು.

ಪೂಜೆಯ ನಂತರ ಸಂಗ್ರಹವಾದ ದವಸಧಾನ್ಯಗಳಿಂದ ಗೋಧಿ ಹುಗ್ಗಿ, ಜೋಳದ ಸಂಗಟಿ ಹಾಗೂ ಸಾರು ತಯಾರಿಸಿ ಹಳ್ಳದ ದಡದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಜಂಗಮರಾಧನೆ ಮತ್ತು ಅನ್ನಸಂತರ್ಪಣೆ ನಡೆಯಿತು.

ರೈತ ಮಹಿಳೆಯರಾದ ಮಲ್ಲಮ್ಮ ಬೇಲೇರಿ, ಮಂಜಕ್ಕ ಸೊಬರದ, ಶಿವಲೀಲಾ ಪಾಟೀಲ, ಸಂಗಮ್ಮ ಬಾಗೂರ, ಅಕ್ಕಮ್ಮ ಚನ್ನಪ್ಪಗೌಡ್ರ, ವೀಣಾ ಬೇಲೇರಿ ಹಾಗೂ ಕವಿತಾ ಕಿರಟಗೇರಿ ಮಾತನಾಡಿ, ಇನ್ನೂ ಕೆಲವೇ ದಿನಗಳಲ್ಲಿ ಮಳೆಯಾಗದಿದ್ದರೆ ಬಿತ್ತಿದ ಬೀಜಗಳು ಒಣಗುವ ಭೀತಿ ಇದೆ. ಈಗಾಗಲೇ ಬೀಜ, ಗೊಬ್ಬರ ಮತ್ತು ಉಳುಮೆಗೆ ಹೆಚ್ಚಿನ ವೆಚ್ಚ ಮಾಡಿದ್ದು, ಮಳೆ ಕೈಕೊಟ್ಟರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

“ಗುರ್ಜಿ ಪೂಜೆ ನಮ್ಮ ಸಂಪ್ರದಾಯ ಮಾತ್ರವಲ್ಲ, ರೈತರ ಬದುಕಿನ ಭರವಸೆಯ ಸಂಕೇತ. ಮಳೆರಾಯ ಕೃಪೆ ತೋರಿ ಬೆಳೆ ಉಳಿಸಲಿ ಎಂಬುದೇ ನಮ್ಮ ಪ್ರಾರ್ಥನೆ.”

 ಶಿವಲೀಲಾ ಪಾಟೀಲ, ರೈತ ಮಹಿಳೆ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!