ಬೆಂಗಳೂರು: ಹಿರಿಯ ನಟ ದೊಡ್ಡಣ್ಣ ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಇದೀಗ ಕಾನೂನಿನ ಕ್ರಮ ಆರಂಭವಾಗಿದೆ. ಬದುಕಿರುವ ವ್ಯಕ್ತಿಯನ್ನು ಮೃತರೆಂದು ಘೋಷಿಸಿ ವೈರಲ್ ಪೋಸ್ಟ್‌ಗಳನ್ನು ಹರಿಬಿಟ್ಟ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೊಡ್ಡಣ್ಣ, ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸಿದ್ದಾರೆ.
‘ಪಬ್ಲಿಕ್ ಫ್ರೆಂಡ್’ ಎಂಬ ಸಾಮಾಜಿಕ ಜಾಲತಾಣ ಖಾತೆಯಲ್ಲಿ ದೊಡ್ಡಣ್ಣ ಅವರ ನಿಧನದ ಸುದ್ದಿ ಹಾಗೂ ಶ್ರದ್ಧಾಂಜಲಿ ಪೋಸ್ಟ್ ಪ್ರಕಟವಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿದ್ದರು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ದೊಡ್ಡಣ್ಣ ಅವರು ಸ್ವತಃ ಸಾರ್ವಜನಿಕವಾಗಿ ಕಾಣಿಸಿಕೊಂಡು ತಾವು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸತತವಾಗಿ ತಮ್ಮ ಸಾವಿನ ಕುರಿತು ನಕಲಿ ಸುದ್ದಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಠಿಣ ಕಾನೂನು ಹೋರಾಟಕ್ಕೆ ಮುಂದಾಗಿರುವ ದೊಡ್ಡಣ್ಣ, ಎಐ ತಂತ್ರಜ್ಞಾನ ಬಳಸಿಕೊಂಡು ಸುಳ್ಳು ಮಾಹಿತಿ ಸೃಷ್ಟಿಸಿ ವೈರಲ್ ಮಾಡಿರುವುದು ಗಂಭೀರ ಅಪರಾಧ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ನಾನು ಬದುಕಿರುವಾಗಲೇ ನನ್ನನ್ನು ಸತ್ತಿದ್ದೇನೆ ಎಂದು ಘೋಷಿಸಿ ಪೋಸ್ಟ್ ಮಾಡಲಾಗಿದೆ. ಇದರಿಂದ ನನಗೆ ಮಾನಸಿಕ ಆಘಾತ ಉಂಟಾಗಿದ್ದು, ಕುಟುಂಬಸ್ಥರು ಹಾಗೂ ಅಭಿಮಾನಿಗಳು ತೀವ್ರ ಸಂಕಟ ಅನುಭವಿಸಿದ್ದಾರೆ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸುಳ್ಳು ಪೋಸ್ಟ್ ಪ್ರಕಟಿಸಿದ ಖಾತೆಯ ಐಪಿ ವಿಳಾಸ, ಅದರ ನಿರ್ವಹಣೆ ಹಾಗೂ ಮಾಹಿತಿ ಹರಡಿದ ಜಾಲದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.



