ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ರದ್ದುಪಡಿಸುವ ಅರ್ಜಿಗೆ ಸಂಬಂಧಿಸಿದಂತೆ ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯ ತನ್ನ ಆದೇಶವನ್ನು ಜೂನ್ 30ಕ್ಕೆ ಕಾಯ್ದಿರಿಸಿದೆ.
ವಚನಾನಂದ ಸ್ವಾಮೀಜಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಜೂನ್ 11ರಂದು ಪೂರ್ಣಗೊಂಡಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಈ ಕುರಿತು ಮಾಹಿತಿ ನೀಡಿದ ಸ್ವಾಮೀಜಿ ಪರ ವಕೀಲ ಎಸ್.ವಿ. ಪಾಟೀಲ್, ಜೂನ್ 23ರಂದು ಹೈಕೋರ್ಟ್ನಲ್ಲಿ ವಚನಾನಂದ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಅದರ ನಂತರ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಜೂನ್ 30ರಂದು ತನ್ನ ಆದೇಶ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಸಂತ್ರಸ್ತ ಬಾಲಕನ ತಾಯಿಯೂ ವಚನಾನಂದ ಸ್ವಾಮೀಜಿಗೆ ನೀಡಿರುವ ಜಾಮೀನನ್ನು ರದ್ದುಪಡಿಸುವಂತೆ ಜೂನ್ 6ರಂದು ಹೈಕೋರ್ಟ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವನ್ನು ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದ ಗಮನಕ್ಕೆ ತರದ ಕಾರಣ ನ್ಯಾಯಾಲಯದ ಆದೇಶ ಪ್ರಕಟಿಸುವ ಪ್ರಕ್ರಿಯೆ ಮುಂದೂಡಿಕೆಯಾಗಿದೆ ಎನ್ನಲಾಗಿದೆ.
ಜೂನ್ 23ರಂದು ಹೈಕೋರ್ಟ್ನಲ್ಲಿ ಜಾಮೀನು ರದ್ದುಪಡಿಸುವ ಅರ್ಜಿಯ ವಿಚಾರಣೆ ನಡೆಯಲಿದ್ದು, ವಚನಾನಂದ ಸ್ವಾಮೀಜಿ ತಮ್ಮ ವಕೀಲರೊಂದಿಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.



