ಮೈಸೂರು: ಎಥೆನಾಲ್ ಉತ್ಪಾದನೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರಂಭವಾಗಿಲ್ಲ. ಮೈಸೂರು ಮಹಾರಾಜರ ಆಡಳಿತದ ಅವಧಿಯಲ್ಲೇ ಎಥೆನಾಲ್ ಉತ್ಪಾದನೆ ಆರಂಭವಾಗಿತ್ತು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ರಿಜ್ವಾನ್ ಅರ್ಷದ್ ಎಥೆನಾಲ್ ವಿಚಾರವಾಗಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿದರು. ಎಥೆನಾಲ್ ಉತ್ಪಾದನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಯಿತು ಎಂಬುದು ಸರಿಯಲ್ಲ. ಮೈಸೂರು ಮಹಾರಾಜರ ಕಾಲದಲ್ಲೇ ಇದರ ಉತ್ಪಾದನೆ ನಡೆಯುತ್ತಿತ್ತು ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಸುಮಾರು 500 ಎಥೆನಾಲ್ ಉತ್ಪಾದನಾ ಕೇಂದ್ರಗಳಿವೆ. ಪ್ರತಿ ವರ್ಷ 1,200 ಕೋಟಿ ಲೀಟರ್ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಎಥೆನಾಲ್ ಸ್ಯಾಂಪಲ್ ಪರೀಕ್ಷೆಗೆ ಸಮಿತಿ ರಚಿಸಲು ಸವಾಲು
ಡೀಸೆಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿಲ್ಲ. ಪೆಟ್ರೋಲ್ನಲ್ಲಿ ಮಾತ್ರ ಎಥೆನಾಲ್ ಬೆರೆಸಲಾಗುತ್ತಿದೆ ಎಂದು ನಿರಾಣಿ ತಿಳಿಸಿದರು. ಪೆಟ್ರೋಲಿಯಂ ಕಂಪನಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವ ಅವಶ್ಯಕತೆ ಇಲ್ಲ ಎಂದರು.
ಸಚಿವ ರಿಜ್ವಾನ್ ಅರ್ಷದ್ ಯಾವ ಪೆಟ್ರೋಲಿಯಂ ಟರ್ಮಿನಲ್ನಿಂದ ಮಾದರಿ ಸಂಗ್ರಹಿಸಿದ್ದಾರೆ? ಮಾದರಿ ಪಡೆಯುವ ಸಂದರ್ಭದಲ್ಲಿ ಯಾವ ಅಧಿಕಾರಿಗಳು ಹಾಜರಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು. ಎಥೆನಾಲ್ ಮಾದರಿಗಳ ಪರೀಕ್ಷೆಗಾಗಿ ಸಚಿವರು ಸಮಿತಿಯೊಂದನ್ನು ರಚಿಸಲಿ ಎಂದು ಸವಾಲು ಹಾಕಿದರು. ಈ ವಿಚಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಮೈಲೇಜ್ ಕಡಿಮೆಯಾಗುವುದನ್ನು ಒಪ್ಪಿಕೊಂಡ ನಿರಾಣಿ
ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಶೇ. 4ರಿಂದ 5ರಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ ಎಂದು ನಿರಾಣಿ ಹೇಳಿದರು. ಆದರೆ ಎಥೆನಾಲ್ ಮಿಶ್ರಣದಿಂದ ಪೆಟ್ರೋಲ್ ಬಂಕ್ಗಳು ಅಥವಾ ಪೆಟ್ರೋಲಿಯಂ ಟರ್ಮಿನಲ್ಗಳಿಗೆ ಯಾವುದೇ ಹೆಚ್ಚುವರಿ ಲಾಭವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿಯೂ ಮಾತನಾಡಿದ ಮುರುಗೇಶ್ ನಿರಾಣಿ, ತಾವು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದರು. ಹೈಕಮಾಂಡ್ ಜವಾಬ್ದಾರಿ ನೀಡಿದರೆ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ ಎಂದರು.
ಪ್ರಸ್ತುತ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ಅವರನ್ನು ಮುಂದುವರಿಸಬಹುದು ಅಥವಾ ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಬಹುದು ಎಂದು ಅವರು ತಿಳಿಸಿದರು.







