ಗದಗ: ನಗರದಲ್ಲಿನ ವಿವಿಧ ಸ್ಪಾ ಹಾಗೂ ಸಲೂನ್ಗಳಲ್ಲಿ ಇಂದು ಪೊಲೀಸರು ದಿಢೀರ್ ತಪಾಸಣೆ ನಡೆಸಿ, ಅಗತ್ಯ ಪರವಾನಗಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದರು.
ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ಸಂಸ್ಥೆಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ತಪಾಸಣೆ ವೇಳೆ ಹಲವು ಸಂಸ್ಥೆಗಳಲ್ಲಿ ಅಗತ್ಯ ದಾಖಲೆಗಳು, ಪರವಾನಗಿಗಳು ಹಾಗೂ ಕಾನೂನುಬದ್ಧ ಅನುಮತಿಗಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿತ ಸಂಸ್ಥೆಗಳಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಎಲ್ಲಾ ಕಡ್ಡಾಯ ಅನುಮತಿಗಳು ಮತ್ತು ಅಗತ್ಯ ದಾಖಲೆಗಳನ್ನು ಒದಗಿಸುವವರೆಗೆ ಕೆಲವು ಸಂಸ್ಥೆಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸ್ಥೆಗಳ ಕುರಿತು ನಗರಸಭೆ, ಹೆಸ್ಕಾಂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಪತ್ರ ಬರೆದು ವ್ಯಾಪಾರ ಪರವಾನಗಿ, ವಿದ್ಯುತ್ ಸಂಪರ್ಕ, ಅಗ್ನಿ ಸುರಕ್ಷತೆ ಹಾಗೂ ಆರೋಗ್ಯ ಮಾನದಂಡಗಳ ಕುರಿತು ಪರಿಶೀಲನೆ ನಡೆಸುವಂತೆ ಕೋರಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಇದಲ್ಲದೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಅಡಿಯಲ್ಲಿ ಅಗತ್ಯ ಪರವಾನಗಿ ಮತ್ತು ನೋಂದಣಿಗಳನ್ನು ಹೊಂದಿರುವ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಸಂಬಂಧಿತ ಇಲಾಖೆಗಳ ವರದಿ ಹಾಗೂ ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ನಗರದಲ್ಲಿನ ಎಲ್ಲಾ ಸ್ಪಾ ಹಾಗೂ ಸಲೂನ್ಗಳು ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ ಸೇರಿದಂತೆ ವಿವಿಧ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.



