ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ.
ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಜೆಡಿಎಸ್‌ನ ಏಕೈಕ ಅಭ್ಯರ್ಥಿ ಗೋವಿಂದರಾಜು ಸೋಲು ಕಂಡಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ. ಮೋಹನ್, ಬಿ.ಎಸ್. ಶಿವಣ್ಣ ಹಾಗೂ ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಆರ್. ರಘು ಮತ್ತು ಲಿಂಗರಾಜು ಪಾಟೀಲ್ ಆಯ್ಕೆಯಾಗಿದ್ದಾರೆ.
ಮತ ಎಣಿಕೆ ಫಲಿತಾಂಶದ ಪ್ರಕಾರ, ಬಿ.ಕೆ. ಹರಿಪ್ರಸಾದ್ 30, ತಿಪ್ಪಣ್ಣಪ್ಪ ಕಮಕನೂರು 30, ಪಿ.ವಿ. ಮೋಹನ್ 29, ಬಿ.ಎಸ್. ಶಿವಣ್ಣ 30 ಹಾಗೂ ವಿನಯ್ ಕಾರ್ತಿಕ್ 32 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್. ರಘು 29 ಮತ್ತು ಲಿಂಗರಾಜು ಪಾಟೀಲ್ 27 ಮತಗಳನ್ನು ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು 14 ಮತಗಳಿಗೆ ಸೀಮಿತರಾದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 11 ಹೆಚ್ಚುವರಿ ಮತಗಳು ದೊರೆತಿರುವುದು ಗಮನಾರ್ಹವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ಕ್ರಾಸ್ ವೋಟಿಂಗ್ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಗೆಲುವಿಗೆ ಅಗತ್ಯವಿದ್ದ ಮತಗಳ ಕೋಟಾವನ್ನು ಲಿಂಗರಾಜು ಪಾಟೀಲ್ ನೇರವಾಗಿ ತಲುಪದಿದ್ದರೂ, ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಎಲಿಮಿನೇಟ್ ಆದ ಬಳಿಕ ಅವರ ಮತಗಳ ವರ್ಗಾವಣೆಯಿಂದ ಲಿಂಗರಾಜು ಪಾಟೀಲ್ ಗೆಲುವು ಸಾಧಿಸಿದರು.
ಒಟ್ಟು 222 ಮತಗಳು ಚಲಾವಣೆಯಾಗಿದ್ದು, ಅವುಗಳಲ್ಲಿ ಒಂದು ಮತ ಅಸಿಂಧುವಾಗಿದೆ. ಮತದಾನ ವೇಳೆ ಸಂಖ್ಯೆ ಸರಿಯಾಗಿ ನಮೂದಿಸದ ಕಾರಣ ಆ ಮತವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದೊಂದಿಗೆ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಜೆಡಿಎಸ್‌ಗೆ ಹಿನ್ನಡೆಯಾಗಿದೆ.



