ವಿಜಯಸಾಕ್ಷಿ ಸುದ್ದಿ, ರೋಣ: ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು, ರೈತರು ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.
ಸಮೀಪದ ಮಾರನಬಸರಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಕೃಷಿ ಇಲಾಖೆ ಗದಗ, ರೋಣ ಹಾಗೂ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಖೇತ್ ಬಚಾವೋ ಅಭಿಯಾನ’ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದ್ದು, ಇದು ಮಣ್ಣಿನ ಫಲವತ್ತತೆ ಮಾತ್ರವಲ್ಲದೆ ಮಾನವ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಉತ್ತಮ ಇಳುವರಿ ಪಡೆಯಲು ಮಣ್ಣಿನ ಗುಣಮಟ್ಟ ಕಾಪಾಡುವುದು ಅತ್ಯಗತ್ಯ ಎಂದು ಹೇಳಿದರು.
ರೈತರು ಬಿತ್ತನೆಗೂ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಜಮೀನಿಗೆ ಸೂಕ್ತವಾದ ಬೆಳೆಗಳ ಆಯ್ಕೆ ಸಾಧ್ಯವಾಗುವುದರ ಜೊತೆಗೆ ಅನಗತ್ಯ ನಷ್ಟವನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಈಗಾಗಲೇ ನಡೆದಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಎಚ್ಚರಿಕೆಯಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಹೆಸರು ಬೆಳೆಗಳಲ್ಲಿ ಸದ್ಯಕ್ಕೆ ಎಡೆ ಹೊಡೆಯುವುದರಿಂದ ಮಣ್ಣಿನ ತೇವಾಂಶ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಅದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಬಿತ್ತನೆಗೂ ಮುನ್ನ ಬೀಜೋಪಚಾರ ಕಡ್ಡಾಯವಾಗಿ ಮಾಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಉತ್ತಮ ಮೊಳಕೆ ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಯಪ್ರಕಾಶ ಪಾಟೀಲ, ರೈತರು ಆರಂಭದಲ್ಲಿ ಕನಿಷ್ಠ ಒಂದು ಎಕರೆ ಜಮೀನಿನಲ್ಲಿ ಸಾವಯವ ಗೊಬ್ಬರ ಬಳಸಿ ಅದರ ಪರಿಣಾಮವನ್ನು ಗಮನಿಸಬೇಕು. ಕೃಷಿ ಹೊಂಡಗಳ ನಿರ್ಮಾಣದ ಮೂಲಕ ಮಳೆನೀರನ್ನು ಸಂಗ್ರಹಿಸಿ, ನೀರಿನ ಸಮರ್ಪಕ ಬಳಕೆ ಹಾಗೂ ಬೆಳೆ ಆಯ್ಕೆಯಲ್ಲಿ ಕೃಷಿ ಇಲಾಖೆಯ ಸಲಹೆ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ ವಹಿಸಿದ್ದರು. ವಿವಿಧ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.
“ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವುದು ರೈತರ ಮೊದಲ ಕರ್ತವ್ಯ. ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡಿ, ಸದ್ಯಕ್ಕೆ ಎಡೆ ಹೊಡೆಯುವುದನ್ನು ತಪ್ಪಿಸಿ. ಸಾವಯವ ಗೊಬ್ಬರ ಬಳಕೆಯಿಂದಲೇ ಭೂಮಿಯ ಆರೋಗ್ಯ ಕಾಪಾಡಲು ಸಾಧ್ಯ.”
– ಚೇತನಾ ಪಾಟೀಲ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ



