ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕಾನೂನಿನ ಜ್ಞಾನದಿಂದ ಅನ್ಯಾಯಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ದೌರ್ಜನ್ಯ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ನ್ಯಾಯವಾದಿ ದಾವಲಸಾಬ ತಾಳಿಕೋಟಿ ಹೇಳಿದರು.
ಪಟ್ಟಣದ ಶಿವಾಜಿಪೇಟೆಯಲ್ಲಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಆಯೋಜಿಸಿದ್ದ ಮಹಿಳಾ ಕಾನೂನುಗಳ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಗೌರವ, ಸುರಕ್ಷತೆ ಹಾಗೂ ಸಮಾನತೆಯನ್ನು ಕಾಪಾಡುವಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತಿದ್ದು, ಶಿಕ್ಷಣ, ಉದ್ಯೋಗ, ಆಸ್ತಿ, ಮದುವೆ ಹಾಗೂ ವಿಚ್ಛೇದನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಕಾನೂನು ಸ್ಪಷ್ಟವಾಗಿ ಗುರುತಿಸಿದೆ ಎಂದು ಹೇಳಿದರು.
ಗೃಹಹಿಂಸೆ ತಡೆ ಕಾಯ್ದೆ-2005, ಲೈಂಗಿಕ ಕಿರುಕುಳ ತಡೆ ಕಾಯ್ದೆ-2013, ಸಮಾನ ವೇತನ ಕಾಯ್ದೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಅನ್ಯಾಯ ಸಂಭವಿಸಿದಾಗ ಪೊಲೀಸ್ ಠಾಣೆ, ನ್ಯಾಯಾಲಯ, ಮಹಿಳಾ ಆಯೋಗ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನ್ಯಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ರೇಣುಕಾ ಗೌಡರ, ಸೇವಾ ಪ್ರತಿನಿಧಿ ಕವಿತಾ ಕೋಟಗಿ, ಸಮನ್ವಯಾಧಿಕಾರಿ ಲಕ್ಷ್ಮೀ, ಸದಸ್ಯರಾದ ರೇಖಾ ಎಲಿಗಾರ, ಅನ್ನಪೂರ್ಣ ಕಂಬಳಿ, ಗಂಗಮ್ಮ, ಲಾಲಬಿ ತಾಳಿಕೋಟಿ, ವಿಜಯಲಕ್ಷ್ಮಿ, ಜಯಶ್ರೀ, ಪಾರಮ್ಮ ಬೊಯಿಟೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



