ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತ ಉಪಹಾರ ವಿತರಿಸುವ ಸೇವಾ ಕಾರ್ಯ 443ನೇ ದಿನಕ್ಕೂ ಯಶಸ್ವಿಯಾಗಿ ಮುಂದುವರಿದಿದ್ದು, ಗುರುವಾರ ಒಂದೇ ದಿನದಲ್ಲಿ ಅತಿ ಹೆಚ್ಚು 110 ಒಳರೋಗಿಗಳಿಗೆ ಉಚಿತ ಉಪಹಾರ ನೀಡಲಾಯಿತು.
ರಾಮನಗರದ ದರ್ಶನ್ ಹೋಟೆಲ್ ಮಾಲೀಕ ಎಸ್.ಎಂ. ಗಂಗಾಧರಯ್ಯ, ಅವರ ಕುಟುಂಬ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಬಳಗದ ಸಹಯೋಗದಲ್ಲಿ ಈ ಸೇವಾ ಕಾರ್ಯ ನಡೆಯುತ್ತಿದೆ. 2025ರ ಮಾರ್ಚ್ 31ರಂದು ಆರಂಭವಾದ ಈ ಯೋಜನೆ ನಿರಂತರವಾಗಿ ಸಾಗುತ್ತಿದ್ದು, ನೂರಾರು ರೋಗಿಗಳಿಗೆ ನೆರವಾಗುತ್ತಿದೆ.
ಸಾಮಾಜಿಕ ಕಳಕಳಿಯಿಂದ ಆರಂಭವಾದ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ವಿವಿಧ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಗಿಗಳ ಆರೈಕೆಗೆ ನೆರವಾಗುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯ ಹಲವರಿಗೆ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಪಾನ್ ಶಾಪ್ ಪುಟ್ಟಣ್ಣ, ಆಟೋ ವೀರೇಶ್, ಮಡಿವಾಳರ ಅಶೋಕ್, ಸೇಡಿಗಾರ್ ಪರಶುರಾಮ್ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ ಉಪಸ್ಥಿತರಿದ್ದರು.
“ಸಮಾಜ ನಮಗೆ ಕೊಟ್ಟಿರುವುದನ್ನು ಸಮಾಜಕ್ಕೇ ಮರಳಿ ನೀಡಬೇಕು ಎಂಬ ಉದ್ದೇಶದಿಂದ ಈ ಸೇವೆ ನಿರಂತರವಾಗಿ ಸಾಗುತ್ತಿದೆ.”
– ಎಸ್.ಎಂ. ಗಂಗಾಧರಯ್ಯ, ದರ್ಶನ್ ಹೋಟೆಲ್ ಮಾಲೀಕರು



