ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯಿತಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸೊನ್ನದ ಗುರುಬಸವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಆಹಾರ ಇಲಾಖೆ, ಕೆಇಬಿ ಹಾಗೂ ಉದ್ಯೋಗ ವಿನಿಮಯ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಗಳ ಪ್ರಗತಿ ವರದಿಯನ್ನು ಮಂಡಿಸಿದರು.
ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿದ್ದು, ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ಕಾರ್ಯನಿರ್ವಹಿಸಬೇಕು ಎಂದು ಸೊನ್ನದ ಗುರುಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯಡಿ ನೋಂದಾಯಿತ ಫಲಾನುಭವಿಗಳಿಗೆ “ಯುವನಿಧಿ ಪ್ಲಸ್” ಕಾರ್ಯಕ್ರಮದ ಮೂಲಕ ಕೌಶಲ್ಯ ತರಬೇತಿ ನೀಡಿ ವಿವಿಧ ಕಂಪನಿಗಳು ಹಾಗೂ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಡಿಗ್ರಿ ಕಾಲೇಜಿನಲ್ಲಿ ಸಮಾವೇಶ ಆಯೋಜಿಸಲು ಪ್ರಯತ್ನಿಸಲಾಗಿತ್ತು. ಆದರೆ ಅದಕ್ಕೆ ಅವಕಾಶ ದೊರೆಯದಿರುವುದು ಯುವಕರಿಗೆ ಅನ್ಯಾಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅನುಮತಿ ಪಡೆದು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಜಂದಿಸಾಹೇಬ್, ಸದಸ್ಯ ಪರಶುರಾಮ ಹೆಗ್ಡಾಳ, ತಾಲೂಕು ಸದಸ್ಯರಾದ ರಾಘು ಉಲವತ್ತಿ, ಮೇಟಿ ಮಂಜುನಾಥ, ತಂಬ್ರಳ್ಳಿ ಗಿರೀಶ್, ವೆಂಕಟೇಶ್ ನಾಯ್ಕ್, ಸಂತೋಷ, ಸರ್ದಾರ್ ರಾಮಣ್ಣ, ಪ್ರಕಾಶ್ ಉಪ್ಪಾರ್, ಸದ್ದಾಂ, ದೊಡ್ಡಬಸಪ್ಪ, ನಾಗಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಸಮಿತಿ ಕಾರ್ಯದರ್ಶಿ ಪಾಲಯ್ಯನಕೋಟೆ ವಿಶ್ವನಾಥ್, ಯೋಜನಾ ಅಧಿಕಾರಿ ನಾಗರಾಜ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹರಿಗೆ ತಲುಪುವಲ್ಲಿ ಯಾವುದೇ ನಿರ್ಲಕ್ಷ್ಯವಾಗಬಾರದು. ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.”
ಸೊನ್ನದ ಗುರುಬಸವರಾಜ್ಅ
ಧ್ಯಕ್ಷರು, ತಾಲೂಕು ಗ್ಯಾರಂಟಿ ಸಮಿತಿ



