ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಕೋಗನೂರು, ಹೆಬ್ಬಾಳ, ಬೆಳಗಟ್ಟಿ ಸೇರಿದಂತೆ ಗಡಿಭಾಗದ ಗ್ರಾಮಗಳ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಮತ್ತು ಬಸ್‌ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ತಹಸೀಲ್ದಾರ್ ಕೆ. ರಾಘವೇಂದ್ರ ರಾವು ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಶಿವು ಮಠದ, ಕೋಗನೂರು, ಗೋವನಕೊಪ್ಪ, ಹೆಬ್ಬಾಳ, ಬೆಳಗಟ್ಟಿ ಸೇರಿದಂತೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಸೇವೆಗಳಿಗಾಗಿ ನಿತ್ಯ ಗದಗ, ಶಿರಹಟ್ಟಿ ಹಾಗೂ ರಾಣೆಬೆನ್ನೂರುಗೆ ಸಂಚರಿಸುತ್ತಿದ್ದಾರೆ. ಆದರೆ ಸಮರ್ಪಕ ಬಸ್ ವ್ಯವಸ್ಥೆಯ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಸಂಚರಿಸುತ್ತಿರುವ ಕೆಲವು ಬಸ್‌ಗಳ ಮಾರ್ಗ ಬದಲಾವಣೆ ಮಾಡಿ ಕೋಗನೂರು, ಗೋವನಕೊಪ್ಪ, ಹೆಬ್ಬಾಳ ಹಾಗೂ ಬೆಳಗಟ್ಟಿ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಬಸ್‌ಗಳಲ್ಲಿ ವಿದ್ಯಾರ್ಥಿ ಪಾಸ್‌ಗೆ ಅವಕಾಶ ಕಲ್ಪಿಸಬೇಕು ಹಾಗೂ ವೇಗದೂತ ಬಸ್‌ಗಳನ್ನು ಈ ಮಾರ್ಗದಲ್ಲಿ ಓಡಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳನ್ನು ಏಳು ದಿನಗಳೊಳಗೆ ಈಡೇರಿಸದಿದ್ದರೆ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಶರಣಪ್ಪ ಪುರ್ತಗೇರಿ, ಪ್ರಕಾಶ ಬಡೆಣ್ಣವರ, ರಾಹುಲ್ ಮಡಿವಾಳರ, ಜಗದೀಶ ಮೇಲಿನಮನಿ, ಕಿರಣಕುಮಾರ ಚನ್ನೂರ, ಮಣಿಕಂಠ ಕಟ್ಟಿ, ಗಾಳೆಪ್ಪ ಮರಚಣ್ಣನವರ, ಸಾಗರ ಡಿಳ್ಳೆಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



