ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಸಕಾಲದಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಹಗರಿಬೊಮ್ಮನಹಳ್ಳಿ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬೆಳೆ ನಷ್ಟಕ್ಕೆ ಎಕರೆಗೆ ₹30 ಸಾವಿರ ಪರಿಹಾರ ನೀಡುವುದರ ಜೊತೆಗೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಅವರ ನಿರ್ದೇಶನದ ಮೇರೆಗೆ ಸಂಘದ ಪದಾಧಿಕಾರಿಗಳು ಸೋಮವಾರ ಪಟ್ಟಣದ ತಾಲೂಕು ಮಿನಿ ವಿಧಾನಸೌಧದಲ್ಲಿ ಉಪ ತಹಸೀಲ್ದಾರ್ ಶಿವಕುಮಾರ ಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಜಿ. ರಮೇಶ್, ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರು ಬಿತ್ತನೆಗೆ ಖರ್ಚು ಮಾಡಿದ ಬೀಜ, ಗೊಬ್ಬರ ಸೇರಿದಂತೆ ಕೃಷಿ ಹೂಡಿಕೆ ಸಂಪೂರ್ಣ ನಷ್ಟವಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತಂಕದ ಸ್ಥಿತಿಯಲ್ಲಿದ್ದು, ಕೆಲವರು ಆತ್ಮಹತ್ಯೆಯಂತಹ ದುಃಸ್ಥಿತಿಯತ್ತ ತಳ್ಳಲ್ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆದ್ದರಿಂದ ಸರ್ಕಾರ ಕೂಡಲೇ ಹಗರಿಬೊಮ್ಮನಹಳ್ಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಎಕರೆಗೆ ₹30 ಸಾವಿರ ಬೆಳೆ ನಷ್ಟ ಪರಿಹಾರ ನೀಡಬೇಕು ಹಾಗೂ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಎಚ್. ದುರಗಪ್ಪ, ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ್ರು, ಹೋಬಳಿ ಉಪಾಧ್ಯಕ್ಷ ಎಚ್.ಐ. ಪರಶುರಾಮ, ಗ್ರಾಮ ಘಟಕ ಅಧ್ಯಕ್ಷ ಎಚ್.ಡಿ. ಮೈಲಾರಿ, ಪದಾಧಿಕಾರಿಗಳಾದ ಎಚ್. ರುದ್ರಗೌಡ, ಕೆ.ಎಂ. ಕೊಟ್ರಯ್ಯ, ಎಂ. ಮೈಲಾರಪ್ಪ, ಪಿ. ಮಲ್ಲಪ್ಪ, ರಾಮಪ್ಪ, ಪಿ. ದುರಗಪ್ಪ, ಈರಣ್ಣ ಮುದಿಯಪ್ಪ, ಬಿ. ಹಾಲಪ್ಪ, ಕೃಷ್ಣಾರೆಡ್ಡಿ, ಮಾರುತಿ ಚಿಗರಿ, ರಾಮಚಂದ್ರ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.



